

ಶಿಕಾರಿಪುರ: ಜಗದ್ಗುರು ಶ್ರೀ ರೇಣುಕಾಚಾರ್ಯರು ನಾಡು ಕಂಡ ಮಹಾತ್ಮರು, ಶ್ರೇಷ್ಠ ಗುರುಗಳು. ಆಂಧ್ರದ ಕೊಲನುಪಾಕಿಯಲ್ಲಿ ಲಿಂಗದಿಂದ ಉದ್ಭವಿಸಿದ ಅವರು ವೀರಶೈವ ಧರ್ಮಸ್ಥಾಪಕರು. ಅವರ ಸ್ಮರಣೆಯಿಂದ ಮನಸ್ಸಿನ ಕಲ್ಮಶಗಳು ನಾಶವಾಗುತ್ತವೆ ಎಂದು ವೀರಶೈವ ಜಂಗಮ ಅರ್ಚಕ ಸಂಘದ ಪ್ರಮುಖ ಶಿವಯ್ಯ ಶಾಸ್ತ್ರಿ ಹೇಳಿದರು.
ಶುಕ್ರವಾರ ಕುಂಬಾರಗುಂಡಿಯಲ್ಲಿರುವ ಶ್ರೀ ರೇಣುಕ ಮಂದಿರದಲ್ಲಿ ರೇಣುಕಾಚಾರ್ಯರ ಜಯಂತಿ ನಿಮಿತ್ತ ತಾಲೂಕು ವೀರಶೈವ ಜಂಗಮ ಅರ್ಚಕರ ಸಂಘ, ರೇಣುಕಾಚಾರ್ಯ ಟ್ರಸ್ಟ್‌ನಿಂದ ಆಯೋಜಿಸಿದ್ದ ವಿಶೇಷ ದೇವತ ಕಾರ್ಯ, ರುದ್ರಾಭಿಷೇಕ ಮತ್ತು ರೇಣುಕರ ಮೂರ್ತಿ ಅಲಂಕಾರ, ಅಭಿಷೇಕ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ವಿಶ್ವ ಗುರು ಬಸವಣ್ಣ, ಮಹಾಶರಣೆ ಅಕ್ಕಮಹಾದೇವಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಅದರಂತೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೂರ್ತಿಯನ್ನೂ ಪಟ್ಟಣದಲ್ಲಿ ಸ್ಥಾಪಿಸಬೇಕು. ಅವರ ಧಾರ್ಮಿಕ ಚಿಂತನೆಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಪ್ರತಿ ಮನೆಗೂ ತಲುಪಿಸಬೇಕಿದೆ. ಅವರ ಮಾನವ ಧರ್ಮದ ಸಂದೇಶ ಎಂದಿಗೂ ಪ್ರಸ್ತುತವಾಗಿರುತ್ತವೆ ಎಂದರು.
ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘದ ಅಧ್ಯಕ್ಷ ಪ್ರಭು ಆರಾಧ್ಯ ಮಠ, ಶಂಭುಲಿಂಗಯ್ಯ ಶಾಸ್ತ್ರಿ ಸಂಗಯ್ಯ, ಮಹಾಂತಯ್ಯ, ಯೋಗೀಶ್ವರ, ಮೃತ್ಯುಂಜಯ, ರೇಣುಕ ಮಂದಿರ ಟ್ರಸ್ಟಿಗಳಾದ ಸದಾಶಿವಪ್ಪ, ಪಾಟೀಲ್ ರಾಜಶೇಖರಯ್ಯ, ಉಮೇಶಯ್ಯ ಇತರರಿದ್ದರು.