

ಮಡಿಕೇರಿ: ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆ ಮಂಡಿಸುವ ಮೂಲಕ ವಕೀಲರ ಬಹಕಾಲದ ಬೇಡಿಕೆ ಈಡೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಲಯನ್ಸ್ ಸಭಾಂಗಣದಲ್ಲಿ ಜರುಗಿದ ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಈಗಾಗಲೇ ವಕೀಲರ ಭದ್ರತೆಗಾಗಿ ರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಈ ಕಾಯ್ದೆ ಜಾರಿಗೆ ಅನೇಕ ವರ್ಷಗಳಿಂದ ವಕೀಲ ಸಮುದಾಯದ ಒತ್ತಾಯವಿತ್ತು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕಾಯ್ದೆಗೆ ಅಂತಿಮ ರೂಪು ನೀಡಲಾಗಿದ್ದು ಮುಂದಿನ ಅದಿವೇಶನದಲ್ಲಿ ಕಾಯ್ದೆ ಮಂಡಿಸಿ ಜಾರಿಗೊಳಿಸಲಾಗುತ್ತದೆ. ಆ ಮೂಲಕ ವೈದ್ಯರಂತೆಯೇ ವಕೀಲರ ಸುರಕ್ಷತೆಗೆ ಕೂಡ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ನ್ಯಾಯವಾದಿಗಳು ತಮ್ಮ ಘನತೆ ಉಳಿಸಿಕೊಂಡಾಗ ಮಾತ್ರ ನ್ಯಾಯಾಂಗದ ಘನತೆ ಉಳಿಯುತ್ತದೆ ಎಂದು ವ್ಯಾಖ್ಯಾನಿಸಿದ ಪೊನ್ನಣ್ಣ, ವಕೀಲ ವೃತ್ತಿಯು ಸಮಾಜದಲ್ಲಿ ಅತ್ಯಂತ ಗೌರವದ ವೃತ್ತಿಯಾಗಿದೆ. ಈ ವೃತ್ತಿಯ ಘನತೆಗೆ ಎಂದೂ ಕುಂದುಂಟಾಗದಂತೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದರು.
ಎಷ್ಟೇ ಉನ್ನತ ಹುದ್ದೆಗೆ ಹೋದರೂ ವಕೀಲನಾದವನು ತಾನೋವ೯ ವಕೀಲನಾಗಿದ್ದೆ ಎಂಬುದನ್ನು ಮರೆಯಬಾರದು ಎಂದು ಹೇಳಿದ ಪೊನ್ನಣ್ಣ, ವಕೀಲನಾಗಿ ದೊರಕುವ ಗೌರವಕ್ಕಿಂತ ಬೇರೊಂದು ಗೌರವ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧಿಕಾರಕ್ಕೆಂದೂ ಲಾಭಿ ಮಾಡದ ತಾನು ಚುನಾವಣೆಗೆ ಸ್ಪರ್ಧಿಸಲು ಕೂಡ ಪಕ್ಷದ ವರಿಷ್ಟರ ಬಳಿ ಅಂಗಲಾಚಲಿಲ್ಲ. ಅಂತೆಯೇ ಶಾಸಕನಾಗಿ ಆಯ್ಕೆಯಾದ ಬಳಿಕವೂ ಕಾನೂನು ಸಲಹೆಗಾರನನ್ನಾಗಿ ಮಾಡಿ ಎಂದು ಕೋರಲಿಲ್ಲ. ಆದರೆ, ವಕೀಲ ವೃತ್ತಿಯಲ್ಲಿನ ಖ್ಯಾತಿಯಿಂದಾಗಿ ಮುಖ್ಯಮಂತ್ರಿಗಳ ಸಲಹೆಗಾರನನ್ನಾಗಿ ನೇಮಕ ಮಾಡಲಾಯಿತು. ವಿಧಾನಮಂಡಲದಲ್ಲಿಯೇ ಇದೀಗ ಶಾಸಕನಾಗಿ ಆಯ್ಕೆಯಾದ ಕಿರಿಯ ವಕೀಲ ಎಂಬ ಹೆಗ್ಗಳಿಕೆ ತನ್ನದಾಗಿದ್ದು ಜನಪ್ರತಿನಿಧಿಯಾಗಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಹೆಚ್ಚು ವಕೀಲರು ಶಾಸಕರಾಗಿ ಆಯ್ಕೆಯಾಗಬೇಕು. ವಕೀಲರು ಕೂಡ ರಾಜಕೀಯ ಕ್ಷೇತ್ರದ ಬಗ್ಗೆ ಆಸಕ್ತಿ ತೋರಬೇಕು ಎಂದೂ ಪೊನ್ನಣ್ಣ ಸಲಹೆ ಮಾಡಿದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮಡಿಕೇರಿ ನ್ಯಾಯಾಲಯದ ಹೊಸ ಸಂಕೀರ್ಣ ಸಾಕಷ್ಟು ಸಮಸ್ಯೆಗಳಿಂದ ಕೂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ನ್ಯಾಯಾಲಯಕ್ಕೆ ತೆರಳುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು, ಸಿಬ್ಬಂದಿಗಳ ಅಗತ್ಯಕ್ಕೆ ತಕ್ಕಂತೆ ಮಡಿಕೇರಿಯಿಂದ ಮಿನಿ ಬಸ್ ಸಂಚಾರಕ್ಕೆ ಕೂಡ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಯಾವುದೇ ವೃತ್ತಿಯಾದರೂ ಆತ್ಮತೃಪ್ತಿ ಅತ್ಯಂತ ಮುಖ್ಯವಾಗಿದೆ. ರಾಜಕೀಯದಲ್ಲಿ ಬೇರೆಯವರ ಸೇವೆ ಮೂಲಕ ಈ ಆತ್ಮ ತೃಪ್ತಿ ದೊರಕುತ್ತದೆ ಎಂದು ಮಾರ್ಮಿಕವಾಗಿ ನುಡಿದ ಮಂತರ್‌ಗೌಡ, ವೈದ್ಯ ಮತ್ತು ವಕೀಲ ವೃತ್ತಿಗಳೆರಡೂ ಸಮಾಜದಲ್ಲಿ ಘನತೆ ಹಾಗೂ ವಿಶ್ವಸಾರ್ಹ ವೃತ್ತಿಗಳಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡರವರನ್ನು ಈ ಸಂದರ್ಭ ಮಡಿಕೇರಿ ವಕೀಲರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜ್, ಖಜಾಂಜಿ ಜಿ.ಆರ್.ರವಿಶಂಕರ್ ವೇದಿಕೆಯಲ್ಲಿದ್ದರು. ಸೌಭಾಗ್ಯ ಪೊನ್ನಪ್ಪ ಸೇರಿದಂತೆ ಸಂಘದ ಅನೇಕ ಹಿರಿಯ ವಕೀಲರು, ಸದಸ್ಯರು ಪಾಲ್ಗೊಂಡಿದ್ದರು.