

ತುಮಕೂರು: ಸಿದ್ದಗಂಗೆಗೆ ಏ.1 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ. ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಮಹಾಶಿವಯೋಗಿಗಳ 118ನೇ ಜಯಂತಿ ಹಾಗೂ ಗುರುವಂದನ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮನ ಹಿನ್ನೆಲೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು. ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿಯು ಲೋಪವಾಗದಂತೆ ಕ್ರಮ ಕೈಗೊಳ್ಳುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ಗೆ ಸಲಹೆ, ಸೂಚನೆಗಳನ್ನು ನೀಡಿದರು.
ಏ.1 ರಂದು ಬೆಳಗ್ಗೆ 11ಕ್ಕೆ ಶ್ರೀಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರಿಗಳ ನೇತೃತ್ವ, ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಕುಮಾರ ಶ್ರೀಗಳ 118ನೇ ಜಯಂತಿಗೆ ರಾಜನಾಥ್ ಸಿಂಗ್ ಚಾಲನೆ ನೀಡುವರು. ಇದೇ ವೇಳೆ ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡಗಳ ಉದ್ಘಾಟನೆ ನೆರವೇರಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸುತ್ತಿರುವುದು ವಿಶೇಷವೆನಿಸಿದೆ. ಕಿರಿಯಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರುವರು.
ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಎನ್.ಶ್ರೀನಿವಾಸಯ್ಯ ಉಪಸ್ಥಿತರಿರುವರು.
ಶಿವಕುಮಾರ ಶ್ರೀಗಳ ಗುರುವಂದನ ಮಹೋತ್ಸವಕ್ಕೆ ನಾಡಿನೆಲ್ಲಡೆಯಿಂದ ಭಕ್ತಾದಿಗಳು ಹರಿದುಬರಲಿದ್ದು ಹಾಗೂ ರಕ್ಷಣಾ ಸಚಿವರ ಭೇಟಿ ಹಿನ್ನೆಲೆ ಸೂಕ್ತರಕ್ಷಣಾ ವ್ಯವಸ್ಥೆ ಕಲ್ಪಿಸಲು ಕ್ರಮವಹಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ರಾಜನಾಥ್ ಸಿಂಗ್ಗೆ ಝಡ್ ್ಲಸ್ ಭದ್ರತೆ ಕಾರಣ ಹೆಚ್ಚಿನ ಪೊಲೀಸರು ನಿಯೋಜಿಸುವ ಹಾಗೂ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ, ಎಎಸ್ಪಿ ವಿ.ಮರಿಯಪ್ಪ, ಶ್ರೀಮಠದ ವತಿಯಿಂದ ಡಾ.ಶಿವಕುಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.