

ಮುಧೋಳ: ಪುರಾಣ, ಪುಣ್ಯಕಥೆ, ಮಹಾತ್ಮರ ದರ್ಶನ ಹಾಗೂ ಉಪದೇಶ ಕೇಳುವುದರಿಂದ ಮನಸ್ಸಿನ ಗುಣದೋಷಗಳು ನಾಶವಾಗುತ್ತವೆ ಎಂದು ಇಂಚಲದ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸುಕ್ಷೇತ್ರ ಮುಗಳಖೋಡದ ಜಗದ್ಗುರು ಶ್ರೀ ಶಿವಾನಂದ ಭಾರತಿ ಆಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರಾವಣ -ಸಂಭ್ರಮ ಶಿವಾವತಾರಿ ಶ್ರೀ ಸಿದ್ಧಾರೂಢರ ಪುರಾಣ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಂತ ಮಹಾತ್ಮರ ಸಂಗ ಮಾಡುವುದರಿಂದ ಹೃದಯ ಅರಳುತ್ತದೆ. ಸಂಕಲ್ಪಗಳು ಸಿದ್ಧಿ ಆಗುತ್ತವೆ ಎಂದು ತಿಳಿಸಿದರು.
ಪುರಾಣಪಟು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಸಿದ್ಧಾರೂಢರೆಂಬ ನಾಮವೊಂದು ಕಲ್ಪವೃಕ್ಷ. ಕಾಮಧೇನು. ಬೇಡಿದ್ದನ್ನು ಕೊಡುವಂತಹ ಮಹಾ ಶಕ್ತಿ. ಸಿದ್ಧಾರೂಢರನ್ನು ನೆನೆದರೆ ಯಾವ ಭಯವೂ ಇರುವುದಿಲ್ಲ ಎಂದು ತಿಳಿಸಿದರು.
ಕುಳಲಿಯ ಭೀಮಾವಧೂತ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಮುಗಳಖೋಡದ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಶಿವಾನಂದ ಭಾರತಿ ಮಠದ ಶಂಕರಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಪರಮಾನಂದ ಮಂಟೂರ, ಬಿ.ಎಚ್. ಮುಂಡಿಗನಾಳ, ಸಂಗಪ್ಪ ಬೆನ್ನೂರ, ಭೀಮಪ್ಪ ಶಂಕ್ರಪ್ಪ ಜಮಖಂಡಿ, ಲಕ್ಷ್ಮಣ ಜಮಖಂಡಿ, ಮಹಾದೇವ ರಂಗಾಪುರ, ಮಹಾಲಿಂಗಪ್ಪ ಕಲ್ಲೋಳಿ, ಮಲ್ಲು ಮದಕರಿ, ಗೋಪಾಲ ದಾಭೋಳಿ, ಹಣಮಂತ ಕೌಜಲಗಿ ಇದ್ದರು.
ತುಲಾಭಾರ: ಭಕ್ತ ಸಮೂಹದಿಂದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳಿಗೆ ತುಲಾಭಾರ ನಡೆಯಿತು. ಸುಮಂಗಲೆಯರು ಆರತಿ, ಕುಂಭ ಹೊತ್ತು ಮಹಾಸ್ವಾಮಿಗಳನ್ನು ಸ್ವಾಗತಿಸಿದರು. ಭಕ್ತರಿಗೆ ಶ್ರೀ ಸಿದ್ಧಾರೂಢ ಕಥಾಮೃತದ ಗ್ರಂಥಗಳನ್ನು ನೀಡಲಾಯಿತು.