ಅರಣ್ಯ ಇಲಾಖೆಯಲ್ಲಿ ದೋಷಯುಕ್ತ ಜ್ಯೇಷ್ಠತಾ ಪಟ್ಟಿ ಪ್ರಕಟ: ಮೂಲ ನಿಯಮ ಉಲ್ಲಂಘಿಸಿ ಪಟ್ಟಿ ತಯಾರಿಕೆ

forest
Published on

ಬೆಂಗಳೂರು:ಅರಣ್ಯ ಇಲಾಖೆಯಲ್ಲಿ ಕೆಲ ಅಧಿಕಾರಿಗಳ ಕರ್ತವ್ಯಲೋಪದಿಂದ ದೋಷಯುಕ್ತ ‘ಜ್ಯೇಷ್ಠತಾ ಪಟ್ಟಿ’ ಪ್ರಕಟವಾಗಿದೆ. ಈ ಕಾರಣದಿಂದ ಕೆಲ ಉಪವಲಯ ಅರಣ್ಯಾಧಿಕಾರಿಗಳ ಪದೋನ್ನತಿಗೆ ತೊಂದರೆಯಾಗಿದೆ.

ಸರ್ಕಾರಿ ನೌಕರರ ಸೇವಾ ಜ್ಯೇಷ್ಠತೆಯ ಸಮರ್ಪಕ ನಿರ್ವಹಣೆಗಾಗಿ ಸರ್ಕಾರ, 1957ರ ‘ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಾವಳಿ ರೂಪಿಸಿ ಅನುಷ್ಠಾನಕ್ಕೆ ತಂದಿದೆ. ಈ ನಿಯಮದಂತೆ ಪ್ರತಿ ವರ್ಷ ಅರಣ್ಯ ಸೇರಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯ. ಇದರ ಹೊರತಾಗಿ ಪರ್ಯಾಯ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವಂತಿಲ್ಲ. ಆದರೆ, ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಮರ್ಪಕ ‘ಜ್ಯೇಷ್ಠತಾ ಪಟ್ಟಿ’ ಪ್ರಕಟವಾಗಿದೆ.

ಉಪ ವಲಯ ಅರಣ್ಯಾಧಿಕಾರಿಗಳ ಜ್ಯೇಷ್ಠತೆಯು, ವೃತ್ತಮಟ್ಟದಲ್ಲಿ ಸಿದ್ಧವಾಗಬೇಕು. ಒಂದು ವೃತ್ತದಿಂದ ಬೇರೆ ವೃತ್ತಕ್ಕೆ ಕೋರಿಕೆ ಮೇಲೆ ವರ್ಗಾವಣೆಯಾದವರನ್ನು ಹೊಸ ವೃತ್ತದಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿಗಳ ಕೆಳಗೆ ಇಡಬೇಕು. ಆದರೆ, ಜ್ಯೇಷ್ಠತೆ ನಿರ್ಧರಿಸುವ ಮೂಲ ನಿಯಮವನ್ನೇ ಉಲ್ಲಂಸಿರುವ ಇಲಾಖೆಯ ಹಿರಿಯ ಅಧಿಕಾರಿಗಳು, ಈ ‘ಜ್ಯೇಷ್ಠತಾ ಪಟ್ಟಿ’ಯನ್ನು ತಯಾರಿಸಿ ಪ್ರಕಟ ಮಾಡಿದ್ದು, ಇದರಿಂದ ನೇರ ನೇಮಕಾತಿ ಅಡಿ ನೇಮಕ ಹೊಂದಿದ್ದ ಉಪವಲಯ ಅರಣ್ಯಾಧಿಕಾರಿಗಳಿಗೆ ಅನುಕೂಲವಾಗಿದೆ.

ಇಲಾಖೆ ಪ್ರಧಾನ ಕಾರ್ಯದರ್ಶಿ ಅಂತರವೃತ್ತ ವರ್ಗಾವಣೆಯಲ್ಲಿ ಜ್ಯೇಷ್ಠತೆ ನಿರ್ಧರಿಸುವಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ ಹೊರಡಿಸಿದ್ದಾರೆ.ವೃಂದಗಳ ನೌಕರರು ಅಂತರವೃತ್ತ ವರ್ಗಾವಣೆ ಹೊಂದಿದ ಸಂದರ್ಭದಲ್ಲಿ ಪ್ರಸ್ತಾಪಿತ ಅಂತರವೃತ್ತ ವರ್ಗಾವಣೆ ಮೂಲಕ ನಿಯುಕ್ತಿಗೊಂಡ ವೃತ್ತದಲ್ಲಿ ಸದರಿ ನೌಕರರ ಜ್ಯೇಷ್ಠತೆಯನ್ನು ‘ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮದಂತೆ ಅನುಸರಿಸಬೇಕು. ಹೀಗಿರುವಾಗ, ಸದರಿ ಸುತ್ತೋಲೆ ಮತ್ತು ಸರ್ಕಾರದ ನಿಯಮವನ್ನೇ ತಿರುಚಿರುವ ಹಿರಿಯ ಅಧಿಕಾರಿಗಳು, ಕೆಲ ಉಪವಲಯ ಅರಣ್ಯಾಧಿಕಾರಿಗಳಿಗೆ ಲಾಭ ಮಾಡಿಕೊಟ್ಟರೆ, ಇನ್ನೂ ಕೆಲ ಉಪವಲಯ ಅರಣ್ಯಾಧಿಕಾರಿಗಳಿಗೆ ತೊಂದರೆ ಉಂಟು ಮಾಡಿದ್ದಾರೆ.

ಹೈಕೋರ್ಟ್ ಆದೇಶ ಉಲ್ಲಂಘನೆ:

ಗಸ್ತು ಅರಣ್ಯಪಾಲಕರ ಜ್ಯೇಷ್ಠತೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್, ನಿಯಮ6 ಪರಂತುಕ 1ರಂತೆ ಜ್ಯೇಷ್ಠತೆ ಪಟ್ಟಿಯನ್ನು ಸಿದ್ಧಪಡಿಸುವಂತೆ ಆದೇಶಿಸಿದೆ. ಆದರೆ, ಈ ಆದೇಶವನ್ನು ಅಧಿಕಾರಿಗಳು ಉಲ್ಲಂಸಿದ್ದಾರೆ. ಅಲ್ಲದೆ, 2016ರ ಜ.11ರಂದು ಹೊರಡಿಸಿದ್ದ ಸರ್ಕಾರದ ಸುತ್ತೋಲೆಯಂತೆ ಪ್ರತಿ ವೃಂದದ ಜ್ಯೇಷ್ಠತಾ ಪಟ್ಟಿಯನ್ನು ಪ್ರತಿ ವರ್ಷ ಜ.1ರಲ್ಲಿ ಇದ್ದಂತೆ ತಯಾರಿಸಿ ಪ್ರಕಟಿಸಬೇಕು. ಅದರಂತೆ, 2025ರ ಜ.1ರಲ್ಲಿ ಇದ್ದಂತೆ ಜ್ಯೇಷ್ಠತಾ ಪಟ್ಟಿಯನ್ನು 2024ರ ಡಿ.31 ರವರೆಗೆ ಪ್ರಕಟಿಸಬೇಕು. ಆದರೆ, ನೇರ ನೇಮಕಾತಿ ಅಡಿ ನೇಮಕ ಹೊಂದಿದ್ದ ಉಪವಲಯ ಅರಣ್ಯಾಧಿಕಾರಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಪ್ರಕಟಿಸಿರುವ ಜ್ಯೇಷ್ಠತಾ ಪಟ್ಟಿಯು 1978ರ ಏ.27ರಿಂದ 2012ರ ಸೆ.5ರವರೆಗೆ ಮಾತ್ರ ಇದೆ. ಇದು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳಿದ ಉಪ ವಲಯ ಅರಣ್ಯಾಧಿಕಾರಿಗಳಿಗೆ ದಿಗ್ಭ್ರಮೆ ಉಂಟು ಮಾಡಿದೆ. ಈ ಬಗ್ಗೆ ಅರಣ್ಯ ಸಚಿವರು ಗಮನಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೆಲ ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net