ಮೈಸೂರು: ಉನ್ನತ ಸ್ಥಾನ ನೀಡಿದ್ದರೂ ಬಿಜೆಪಿ ಸೇರಿರುವ ವೀರಶೈವ ಮುಖಂಡ ಗುರುಪಾದಸ್ವಾಮಿ ಅವರಿಂದ ಕಾಂಗ್ರೆಸ್‌ಗೆ ಯಾವುದೇ ಹಾನಿ ಇಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್ ಹೇಳಿದರು.
ಗುರುಪಾದಸ್ವಾಮಿ ಈ ಹಿಂದೆಯೂ ವೈಯಕ್ತಿಕ ಆಸೆಗಳಿಗಾಗಿ ವಿವಿಧ ಪಕ್ಷಗಳಿಗೆ ಹೋಗಿ ಕಾಂಗ್ರೆಸ್‌ಗೆ ಬಂದಿದ್ದರು. ಕಾಂಗ್ರೆಸ್ ಅವರಿಗೆ ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಯಂತಹ ಉನ್ನತ ಸ್ಥಾನ ನೀಡಿತ್ತು. ಇಷ್ಟೆಲ್ಲಾ ಅಧಿಕಾರ ನೀಡಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪ ಸರಿಯಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಣ್ಣದೊಂದು ಚುನಾವಣೆಯಲ್ಲೂ ಗೆಲ್ಲಲಾಗದ ಅವರು ‘ಲೋಕಸಭಾ ಚುನಾವಣಾ ಅಭ್ಯರ್ಥಿಯನ್ನಾಗಿಸಲಿಲ್ಲ’ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ತಮ್ಮೊಂದಿಗೆ ಇನ್ನಿತರ ವೀರಶೈವ ಮುಖಂಡರೂ ಬಿಜೆಪಿ ಸೇರಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಪಕ್ಷಾಂತರ ಮಾಡಿದ ಆ ಮುಖಂಡರ ಹೆಸರುಗಳನ್ನು ಬಹಿರಂಗ ಪಡಿಸಲಿ. ವಾಸ್ತವವಾಗಿ ಬಿಜೆಪಿಯಲ್ಲಿರುವ ಸಮುದಾಯದ ಮುಖಂಡರೇ ಕಾಂಗ್ರೆಸ್‌ಗೆ ಬರುತ್ತಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ವರುಣ ಕ್ಷೇತ್ರದ ವೀರಶೈವ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕಿದ್ದರು. ಈಗಲೂ ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಹೀಗಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮುಖಂಡರಾದ ಚಂದ್ರಶೇಖರ್, ರತ್ನಶೇಖರ್, ಗುರುಪಾದಸ್ವಾಮಿ, ಪರಶಿವಮೂರ್ತಿ ಇತರರು ಇದ್ದರು.