

ಹುಕ್ಕೇರಿ: ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗಿಂತಲೂ ಬಿಜೆಪಿ ಕಾರ್ಯಕರ್ತರು ಹೆಚ್ಚು ಶ್ರಮಿಸಿದ್ದಾರೆ. ಆದರೆ, ವದಂತಿ ಮತ್ತು ಅಪಪ್ರಚಾರದಿಂದ ಸೋಲಾಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೋಲಿನ ಪರಾಮರ್ಶೆ ಹಾಗೂ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿ, ಸಂಸದರಾಗಿ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದವರ ಸಾಲಿನಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮೊದಲಿಗರಾದರೆ, ನಾನು ಎರಡನೇ ಸ್ಥಾನದಲ್ಲಿರುವೆ ಎಂದರು.
ಸಂಸದರಿದ್ದ ಸಂದರ್ಭದಲ್ಲಿ ಕೋವಿಡ್ ಹಾಗೂ ಪ್ರವಾಹಗಳಿಂದ ಮೂರು ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಲಿಲ್ಲ. ಎರಡು ವರ್ಷ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವೆ. ಸೋಲಿನಿಂದ ಧೃತಿಗೆಡುವ ಅವಶ್ಯಕತೆಯಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಜನಪರ ಕಾರ್ಯ ಕೈಗೊಳ್ಳಲು ಅನುಕೂಲವಿದೆ. ಹುಕ್ಕೇರಿ ಮತಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿದೆ ಎಂದರು.
ಮುಖಂಡರಾದ ಗುರುರಾಜ ಕುಲಕರ್ಣಿ, ರೋಹನ ನೇಸರಿ, ಈರಗೌಡ ಪಾಟೀಲ, ಮಧುಕರ ಕರನಿಂಗ, ದುರ್ಗಪ್ಪ ಪಾಟೀಲ, ರಮೇಶ ಡಬ್ಬು ಮಾತನಾಡಿ, ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.
ಪರಗೌಡ ಪಾಟೀಲ, ಪ್ರಕಾಶ ಮುತಾಲಿಕ, ಪಿಂಟು ಶೆಟ್ಟಿ, ಸಿದ್ರಾಮ ಮುಗಳಿ, ವೀರೇಶ ಗಜಬರ, ಬಸವರಾಜ ನಂದಿಕೋಲಮಠ,
ಮಹಾವೀರ ಬಾಗಿ, ಚಿದಾನಂದ ಕಿಲ್ಲೇದಾರ, ಸಂಜು ಬಸ್ತವಾಡ, ಎಸ್.ಎಂ.ಕಾನಡೆ, ರವಿ ಪಾಟೀಲ, ರಾಜು ಚೌಗಲಾ, ಸವಿತಾ ಏಣಗಿಮಠ, ತ್ರಿವೇಣಿ ಕಾಂಬಳೆ, ಶಾಂತಾ ಸೊಲ್ಲಾಪುರೆ, ಸಂಗೀತಾ ಮಾನಗಾಂವಿ ಇತರರಿದ್ದರು.