

ಚಿತ್ರದುರ್ಗ: ಭಾರತ್ ಜೋಡೋ ಯಶಸ್ಸು ಬಿಜೆಪಿ ನಾಯಕರಲ್ಲಿ ತಳಮಳ ಉಂಟು ಮಾಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲು ಗ್ಯಾರಂಟಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಬೆಲೆ ಏರಿಕೆ ಮೂಲಕ ಬಡವರ ಬದುಕು ದುರ್ಬಲಗೊಳಿಸಿದ ಬಿಜೆಪಿ ಕೆಲವೇ ಶ್ರೀಮಂತರನ್ನು ಬೆಳೆಸುತ್ತಿದ್ದು, ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
2014ರಲ್ಲಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯ ಬಯಲಿಗೆ ಎಳೆಯುವಲ್ಲಿ ಹಾಗೂ ದೇಶದೊಳಗೆ ಒಡೆದು ಹೋಗಿರುವ ಮನಸ್ಸುಗಳ ಜೋಡಿಸುವ ಯಾತ್ರೆಯಾಗಿ ಭಾರತ್ ಜೋಡು ಯಶಸ್ಸು ಕಂಡಿತು. ಹೀಗಾಗಿ ಬಿಜೆಪಿ ನಾಯಕರು ಆತಂಕದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಯಾತ್ರೆಗೆ ವರ್ಷವಾಗಿದೆ. ಆದರೆ, ಆ ನೆನೆಪುಗಳು ಇನ್ನೂ ಹಸಿರಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನೂರು ದಿನಗಳಾಗಿದೆ. ಬಿಜೆಪಿಯ ಭ್ರಷ್ಟಾಚಾರ ಆಡಳಿತದ ಕಪಿಮುಷ್ಟಿಯಿಂದ ಹೊರಬಂದಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಸೋಲಿನ ಭಯದಿಂದ ಜೆಡಿಎಸ್ ಜತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ಸಿಗರು ಒಗ್ಗಟ್ಟಾಗಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕ ಸ್ಥಾನ ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿಸಲು ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈ ಯಾತ್ರೆಯೂ ಇಡೀ ದೇಶದಲ್ಲಿ ಸಂಚರಿಸಿ ಬಿಜೆಪಿಯ ಅವಹೇಳನಕ್ಕೆ ತಕ್ಕ ಉತ್ತರ ನೀಡಿತು. 9 ವರ್ಷದ ಆಡಳಿತ ವೈಫಲ್ಯ ಹೇಳಿ ಪಕ್ಷಕ್ಕೆ ಬಲ ತುಂಬುವ ಕೆಲಸ ನಮ್ಮ ನಾಯಕ ರಾಹುಲ್ ಗಾಂಧಿ ಮಾಡಿದರು. ಜಿಲ್ಲೆಯ 5, ರಾಜ್ಯದ 136 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿ.ಎಸ್.ಮಂಜುನಾಥ್, ಆರ್.ಕೆ.ಸರ್ದಾರ್, ಡಿ.ಎನ್.ಮೈಲಾರಪ್ಪ, ಎಲ್.ತಿಪ್ಪೇಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಎಸ್.ಎನ್.ರವಿಕುಮಾರ್, ಎನ್.ಡಿ.ಕುಮಾರ್, ಕಂದಿಕೆರೆ ಸುರೇಶ್‌ಬಾಬು, ತಾಹೀರ್, ಮದಸೀರಾ ಇತರರಿದ್ದರು.
ಇದಕ್ಕೂ ಮುನ್ನ ಜೋಡೋ ನೆನಪಾರ್ಥ ಕನಕ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೂ ಪಾದಯಾತ್ರೆ ನಡೆಯಿತು.