ಮಹೇಶ ತಿಮರೋಡಿ ಬಂಧನ, ಹಿರಿಯಡ್ಕ ಜೈಲಿಗೆ ರವಾನೆ

Timma Lead
Published on

ನಿಷೇಧಾಜ್ಞೆ ಹೊರಡಿಸಿದ ಉಡುಪಿ ಡಿಸಿ

ಬಿ.ಎಲ್​. ಸಂತೋಷ್​ ವಿರುದ್ಧ ಅವಹೇಳನ ಪೋಸ್ಟಿಂಗ್​

 14 ದಿನ ಪೊಲೀಸ್​ ಕಸ್ಟಡಿ ಆ.23ರಂದು ಮುಂದಿನ ವಿಚಾರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ:

ಬಿಜೆಪಿ ರಾಷ್ಟ್ರೀಯ ನಾಯಕ ಬಿ.ಎಲ್​. ಸಂತೋಷ್​ ವಿರುದ್ಧ ಅವಹೇಳನಕಾರಿ ಪೋಸ್ಟಿಂಗ್​ ಪ್ರಕರಣಕ್ಕೆ ಸಂಬಂಧಿಸಿ ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಆಗಸ್ಟ್ 21ರಂದು ಬೆಳಗ್ಗೆ ಬಂಧಿಸಿ ಕರೆ ತರಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್​ ತಿಳಿದಿದ್ದಾರೆ.

SP Udupi
ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಆಗಮಿಸಲು ಬ್ರಹ್ಮಾವರ ಠಾಣೆಗೆ ಆಗಮಿಸುವಂತೆ ಎರಡು ಬಾರಿ ನೋಟಿಸ್​ ನೀಡಿದ್ದರೂ ಅಹ ಯಾವುದೇ ಪ್ರತಿಕ್ರಿಯೆ ನೀಡದ್ದರಿಂದ ಜಾಮೀನು ರಹಿತ ವಾರೆಂಟ್​ ಮೂಲಕ ಬಂಧಿಸಲಾಗಿದೆ. ಬ್ರಹ್ಮಾವರ ಠಾಣೆಗೆ ಕರೆದೊಯ್ಯುವ ಮೊದಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನಿಷೇಧಾಜ್ಞೆ ಜಾರಿ

Timma 2
ತಿಮ್ಮರೋಡಿ ಅವರನ್ನು ಉಜಿರೆಯಲ್ಲಿ ಬಂಧಿಸಿ ಬ್ರಹ್ಮಾವರ ಪೊಲೀಸ್​ ಠಾಣೆಗೆ ಕರೆ ತಂದಿದ್ದಾರೆ. ಅವರು ಸಕ್ರಿಯ ಹಿಂದು ಕಾರ್ಯಕರ್ತರಾಗಿದ್ದು, ಸೌಜನ್ಯಾ ಪರ ಹೋರಾಟಗಾರರೂ ಆಗಿದ್ದಾರೆ. ಹೀಗಾಗಿ ಬ್ರಹ್ಮಾವರ ಠಾಣೆಗೆ ಅವರನ್ನು ತನಿಖೆಗೆಂದು ಕರೆ ತರುವಾಗ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್​ ಠಾಣೆಯ ಸುತ್ತಲಿನ 500 ಮೀಟರ್​ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನಿಷೇಧಾಜ್ಞೆ ಹೊರಡಿಸಿದ್ದಾರೆ. ಈ ಆದೇಶ ಆ.21ರ ಮಧ್ಯಾಹ್ನ 1 ಗಂಟೆಯಿಂದ ಆ.22ರ ಮಧ್ಯಾಹ್ನ 1ರ ವರೆಗೆ ಜಾರಿ ಇರಲಿದೆ ಎಂದು ಡಿಸಿ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ಆ.16ರಂದು ಆರೋಪಿ ಮಹೇಶ ಶೆಟ್ಟಿ ತಿಮರೋಡಿ ಅವರು ತನ್ನ ಫೇಸ್​ ಬುಕ್​ ಪೇಜ್​ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಅವರ ಕುರಿತಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದರು. ಇದು ಹಿಂದು ಧರ್ಮದ ನಾಯಕನನ್ನು ಅವಹೇಳನ ಮಾಡಿ, ಅನ್ಯ ಧರ್ಮಗಳ ಹಾಗೂ ಸಮುದಾಯದ ನಡುವೆ ದ್ವೇಷ ಭಾವನೆ ಹಾಗೂ ವೈಮನಸ್ಸು ಉಂಟು ಮಾಡುತ್ತಿದೆ. ತಿಮರೋಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲದ ಅಧ್ಯಕ್ಷ ರಾಜೀವ ಕುಲಾಲ್​ ಅವರು ಬ್ರಹ್ಮಾವರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆರೋಪಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ತೀವ್ರ ವಿಚಾರಣೆ

Timma 3
ತಿಮರೋಡಿ ಅವರನ್ನು ವಶಕ್ಕೆ ಪಡೆದ ಬಳಿಕ ಉಡುಪಿ ಎಸ್ಪಿ ಹರಿರಾಂ ಶಂಕರ್​ ನೇತೃತ್ವದಲ್ಲಿ ಬ್ರಹ್ಮಾವರ ಠಾಣಾಧಿಕಾರಿ ಅಶೋಕ ಮಾಲಗಿ ಹಾಗೂ ಇನ್ನಿತರ ಅಧಿಕಾರಿಗಳ ತಂಡ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ವಿಚಾರಣೆ ನಡೆಸಿತು. ಸಂಜೆಯ ವೇಳೆ ಪೊಲೀಸರು ಅವರನ್ನು ಬಂಧಿಸಿ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗೊಳಪಡಿಸಿ, ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾಗಿ ತಿಳಿದುಬಂದಿದೆ.

ಬಿಗಿ ಪೊಲೀಸ್​ ಬಂದೋಬಸ್ತ್​

ಮಹೇಶ ತಿಮರೋಡಿ ಬಂಧನದ ಹಿನ್ನೆಲೆಯಲ್ಲಿ ಬ್ರಹ್ಮಾವರ ಠಾಣೆಯ ಬಳಿ ಹಾಗೂ ಬ್ರಹ್ಮಾವರ ಸಮುದಾಯ ಆಸ್ಪತ್ರೆಯ ಪರಿಸರದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಸ್ಥಳದಲ್ಲಿ ಹಾಗೂ ಪೊಲೀಸ್​ ಠಾಣೆಯ ಬಳಿ ಬಿಗು ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು.

ಹಿರಿಯಡ್ಕ ಜೈಲಿಗೆ ತಿಮರೋಡಿ ರವಾನೆ

ಪ್ರಕರಣಕ್ಕೆ ಸಂಬಂಧಿಸಿ ಮಹೇಶ ಶೆಟ್ಟಿ ತಿಮರೋಡಿ ಅವರಿಗೆ ಬ್ರಹ್ಮಾವರ ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಬ್ರಹ್ಮಾವರದ ಪೊಲೀಸರು ಬಿಗಿ ಬಂದೋಬಸ್ತ್​ನಲ್ಲಿ ತಿಮರೋಡಿ ಅವರನ್ನು ಹಿರಿಯಡ್ಕ ಜೈಲಿಗೆ ಸ್ಥಳಾಂತರಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಆ.23ರಂದು ನಡೆಯಲಿದೆ.

ತಿಮರೋಡಿ ಬೆಂಬಲಿಗರ ದಾಂಧಲೆ; ಮೂವರು ವಶಕ್ಕೆ

* ಪೊಲೀಸ್​ ಕರ್ತವ್ಯಕ್ಕೆ ಅಡ್ಡಿ* ಎಎಸ್ಪಿ ಕಾರಿಗೆ ಡಿಕ್ಕಿ, ಅಂಗರಕ್ಷಕನಿಗೆ ಗಾಯಉಡುಪಿ: ಮಹೇಶ ಶೆಟ್ಟಿ ತಿಮರೋಡಿ ಬಂಧನ ಖಂಡಿಸಿ ಅವರ ಬೆಂಬಲಿಗರು ಪೊಲೀಸ್​ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಕಾರ್ಕಳದಲ್ಲಿ ಗುರುವಾರ ಬೆಳಗ್ಗೆ ನಡೆದಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಸೃಜನ್​ ಎಲ್​., ಹಿತೇಶ್​, ಹಾಗೂ ಸಹನ್​ ಎಂಬವರ ವಿರುದ್ಧ ಕಾರ್ಕಳದ ಎಎಸ್ಪಿಯ ಅಂಗರಕ್ಷಕ ಪ್ರಕಾಶ ಎಂಬವರು ದೂರು ದಾಖಲಿಸಿದ್ದಾರೆ.

1
2
3
ಗುರುವಾರ ಬೆಳಗ್ಗೆ ಇಲಾಖಾ ವಾಹನಗಳಲ್ಲಿ ತನಿಖಾಧಿಕಾರಿ ಮತ್ತು ಇತರ ಇಲಾಖಾ ಅಧಿಕಾರಿಗಳ ತಂಡದೊಂದಿಗೆ ಮೇಲಾಧಿಕಾರಿಗಳ ಆದೇಶದಂತೆ ಬ್ರಹ್ಮಾವರ ಪೊಲೀಸ್​ ಠಾಣಾ ಪೊಲೀಸರು ಮಹೇಶ ತಿಮರೋಡಿ ವಶಕ್ಕೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮಕ್ಕೆ ಹೋಗಿದ್ದರು. ಬೆಳಗ್ಗೆ 10:45ರ ವೇಳೆಯಲ್ಲಿ ಅವರನ್ನು ವಶಕ್ಕೆ ಪಡೆದರು. ಈ ವೇಳೆ ತಿಮರೋಡಿಯ 50ಕ್ಕೂ ಹೆಚ್ಚು ಬೆಭಲಿಗರು ಸೇರಿದ್ದು, ಪೊಲೀಸರ ಕರ್ತವ್ಯ ಅಡ್ಡಿಪಡಿಸಿದರು. ತೊಂದರೆ ಮಾಡದಂತೆ ತಿಳಿವಳಿಕೆ ನೀಡಿದರೂ ಗಲಾಟೆ ಮಾಡುತ್ತಿದ್ದರು. ತಿಮರೋಡಿ ವಶಕ್ಕೆ ಪಡೆದ ಪೊಲೀಸರು ಅವರ ಮನೆಯಿಂದ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ ಮೂಲಕ ಬ್ರಹ್ಮಾವರಕ್ಕೆ ಹೊರಟಿದ್ದರು. ಆಗಲೂ ಸಹ ಬೆಂಬಲಿಗರು ತಿಮರೋಡಿಯವರನ್ನುಯ ಏಕೆ ಬಂಧಿಸುತ್ತೀರಿ ಎಂದು ಪ್ರಶ್ನಿಸುತ್ತ, ಅನೇಕ ಕಾರು, ಬೈಕ್​ಗಳ ಮೂಲಕ ಪೊಲೀಸ್​ ವಾಹನಗಳನ್ನು ಹಿಂಬಾಲಿಸುತ್ತಲೇ ಇದ್ದರು.

ಅಂಗರಕ್ಷಕನಿಗೆ ಗಾಯ

Car 1 (1)
Car 2
ಕೆಎ 70 ಎಂ -3048 ನಂಬ್ರದ ಬಿಳಿ ಬಣ್ಣದ ಸ್ವಿಪ್ಟ್​ ಕಾರಿನಲ್ಲಿದ್ದ ಮೂವರು 2-3 ಬಾರಿ ಕಾರ್ಕಳದ ಎಸ್ಪಿ ಇದ್ದ ಕಾರಿಗೆ ಗಡಿಕ್ಕಿ ಮಾಡಿದ್ದಾರೆ. ವಾಹನಗಳನ್ನು ನಿಲ್ಲಿಸಿ, ನಮ್ಮನ್ನು ಹಿಂಬಾಲಿಸದಂತೆ ಪೊಲೀಸರು ತಿಳಿಸಿದರೂ ಸಹ, ನಿಮಗೆ ಏನು ಮಾಡಲಿಕ್ಕೆ ಆಗುತ್ತದೆ? ಪೊಲೀಸರೇ, ತಿಮರೋಡಿಯನ್ನು ಏಕೆ ಬಂದಿಸುತ್ತೀರಿ? ಅವರನ್ನು ಇಲ್ಲಿಯೇ ಬಿಡಿ ಎಂದು ಅಧಿಕಾರಿಗಳಿಗೆ ಏರು ಧ್ವನಿಯಲ್ಲಿ ಮಾತನಾಡಿದರು. ಬಳಿಕ ತಿಮರೋಡಿ ಇದ್ದ ವಾಹನದೊಂದಿಗೆ ಪೊಲೀಸರು ಮತ್ತೆ ಮುಂದೆ ಸಾಗುತ್ತಿದ್ದರು. ಈದು, ಹೊಸ್ಮಾರು ದಾಟಿ ಮುಂದೆ ಬರುವಾಗ ಪುನಹ ಬೆಂಗಾವಲು ವಾಹನ ಓವರ್​ಟೇಕ್​ ಮಾಡಿಕೊಂಡು ಅಜಾಗರೂಕತೆಯಿಂದ ಬಂದು ಮತ್ತೆ ಎಎಸ್ಪಿ ಕಾರಿಗೆ ಡಿಕ್ಕಿ ಮಾಡಿದ್ದಾರೆ. ಇಲಾಖಾ ವಾಹನ ಕೆಎ 20 ಜಿ 0669 ಹಿಂಬದಿಯಲ್ಲಿ ಜಖಂ ಆಗಿದ್ದು, ವಾಹನದಲ್ಲಿದ್ದ ಅಂಗರಕ್ಷಕನಿಗೆ ನೋವು ಉಂಟಾಗಿತ್ತು. ಈ ಘಟನೆ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net