

ಮೈಸೂರು: ಮದುವೆಗೆ ಹೋಗಿದ್ದು ಸತ್ಯ. ಆದರೆ ಯಾವ ಪೆನ್‌ಡ್ರೈವ್, ಯಾವ ನವೀನ್‌ಗೌಡನೂ ನನಗೆ ಗೊತ್ತಿಲ್ಲ. ಆರೋಪ ಮಾಡಿರುವ ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅರಕಲಗೂಡು ಶಾಸಕ ಎ.ಮಂಜು ಸ್ಪಷ್ಟಪಡಿಸಿದರು.
ರಸ್ತೆಯಲ್ಲಿ ಏ.20ರಂದು ಸಿಕ್ಕ ಪೆನ್‌ಡ್ರೈವ್ ಅನ್ನು ಅರಕಲಗೂಡು ಶಾಸಕ ಎ.ಮಂಜು ಅವರಿಗೆ ಏ.21ರಂದು ಕಲ್ಯಾಣಮಂಟಪವೊಂದರಲ್ಲಿ ಕೊಟ್ಟಿದ್ದೆ, ಅವರೇ ವಿಡಿಯೋ ವೈರಲ್ ಹಿಂದೆ ಇರುವ ಮಹಾನಾಯಕ ಎಂದು ಸಾಮಾಜಿಕ ಜಾಲತಾಣದಲ್ಲಿ ನವೀನ್‌ಗೌಡ ಬರೆದುಕೊಂಡಿರುವ ವಿಚಾರವಾಗಿ ನಗರದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಆರೋಪ ಅಲ್ಲಗಳೆದರು.
ಮದುವೆಯಲ್ಲಿ ನೂರಾರು ಜನರನ್ನು ಮಾತನಾಡಿಸಿದ್ದೇನೆ. ಅದರಲ್ಲಿ ಇವನು ಯಾರು ಎಂಬುದು ಗೊತ್ತಿಲ್ಲ. ನಾನು ಇವತ್ತಿನವರೆಗೆ ಅವನ ಹೆಸರು ಕೇಳಿಲ್ಲ, ಅವನನ್ನು ನೋಡಿಯೂ ಇಲ್ಲ. ನನಗೆ ಯಾವ ಪೆನ್‌ಡ್ರೈವ್ ತಲುಪಿಯೇ ಇಲ್ಲ ಎಂದು ಹೇಳಿದರು.
ನವೀನ್‌ಗೌಡನ ಹಿಂದೆ ಯಾರೋ ಪ್ರಬಲರು ಇರುವುದು ಸತ್ಯ. ಅದರ ಬಗ್ಗೆ ತನಿಖೆಯಾಗಬೇಕು. ಆತನ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ನನ್ನ ಮತ್ತು ಎಚ್.ಡಿ.ದೇವೇಗೌಡರ ಸಂಬಂಧ ಹಾಳು ಮಾಡಲು ಈ ರೀತಿ ಮಾಡಲಾಗುತ್ತಿದೆ. ಇಂತಹ ನೀಚ ರಾಜಕಾರಣವನ್ನು ನಾನು ಯಾವತ್ತು ಮಾಡಿಲ್ಲ ಎಂದರು.
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು. ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ.ಪೆನ್‌ಡ್ರೈವ್ ಪ್ರಕರಣದಿಂದ ದೇವೇಗೌಡರು ಬಹಳ ನೊಂದಿದ್ದಾರೆ. ಅವರನ್ನು ಮೊನ್ನೆ ಭೇಟಿ ಮಾಡಿದಾಗ ಈ ವಿಚಾರದ ಬಗ್ಗೆ ನನಗೆ ಯಾಕೆ ಮೊದಲೇ ಹೇಳಲಿಲ್ಲ ಎಂದು ಕೇಳಿದರು. ಯಾರಿಗೂ ಇಂತಹ ಸ್ಥಿತಿ ನಿರ್ಮಾಣವಾಗಬಾರದು ಎಂದು ವಿಷಾದ ವ್ಯಕ್ತಪಡಿಸಿದರು.
ಪೆನ್‌ಡ್ರೈವ್ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್‌ಗೌಡ ಮೊದಲು ಬಂಧನ ಆಗಲಿ. ಅವನ ಮೂಲಕವೇ ಪೆನ್‌ಡ್ರೈವ್ ಎಲ್ಲ ಇತಿಹಾಸ ತಿಳಿಯುತ್ತದೆ. ಆದರೆ ಯಾಕೆ ಅವನ ಬಂಧನ ತಡವಾಗುತ್ತಿದೆ ಎಂದು ಪ್ರಶ್ನಿಸಿದರು.
ನಾನು ಜೈಲಿನಲ್ಲಿ ಎಚ್.ಡಿ.ರೇವಣ್ಣ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರ ಪ್ರತಿ ಕಷ್ಟ ಕಾಲದಲ್ಲೂ ನಾನು ಇರುತ್ತೇನೆ. ನಾನು ಅವರ ಕುಟುಂಬದ ಜತೆಯಲ್ಲಿ ಇದ್ದೇನೆ ಎಂಬ ಕಾರಣಕ್ಕಾಗಿಯೇ ಈಗ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.