ಮೈಸೂರು: ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎಸ್.ಪ್ರೇಮಾ ಶಂಕರೇಗೌಡ ದೂರಿದರು.
ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಅವರು ಸಾಲ ಮನ್ನಾ, ಲಾಟರಿ ನಿಷೇಧ, ಸಾರಾಯಿ ನಿಷೇಧ ಮೂಲಕ ಮಹಿಳೆಯರ ಜೀವನ ಸುಧಾರಣೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಉತ್ತಮ ಭವಿಷ್ಯದಿಂದ ಕೆಲ ತಾಯಂದಿರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಬೇಸರದಿಂದ ಹೇಳಿದ್ದಾರೆಯೇ ಹೊರತು ಯಾವುದೇ ದುರುದ್ದೇಶದಿಂದ ಅಲ್ಲ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.
ಮಹಿಳೆಯರನ್ನು ಉದ್ದೇಶಿಸಿ ಮಾತನಾಡುವಾಗ ಕಾಂಗ್ರೆಸ್ ಸರ್ಕಾರದ ಕ್ಷಣಿಕ ಭರವಸೆಗಳಿಗೆ ಮರುಳಾಗಬೇಡಿ ಎಂದು ಹೇಳಿದ್ದನ್ನೇ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಇಂತಹ ಅಪಪ್ರಚಾರ ಮಾಡುತ್ತಿದೆ ಎಂದು ದೂರಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮದ್ದೂರಿನ ಶಾಸಕ ಉದಯ್ ಅವರು ನೇರವಾಗಿಯೇ ಮಹಿಳೆಯರ ವಿರುದ್ಧ ಈ ಹಿಂದೆ ಕೆಲ ಹೇಳಿಕೆಗಳನ್ನು ನೀಡಿದ್ದಾರೆ. ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಶೀಘ್ರದಲ್ಲಿ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಜೆಡಿಎಸ್ ಮತ್ತು ಬಿಜೆಪಿ ಮಹಿಳಾ ಪ್ರಮುಖರಾದ ಲಕ್ಷ್ಮಿಶಿವಣ್ಣ, ಭಾಗ್ಯಮಾದೇಶ್, ಭಾಗ್ಯವತಿ, ಲಕ್ಷ್ಮೀಶಿವರಾಜ, ವೇದಾವತಿ, ಪ್ರಮೀಳಾ ಭರತ್ ಇದ್ದರು.