

ಗುರುಪುರ: ಮಹಿಳೆಯ ಮಾನಭಂಗ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಜಾಮೀನು ಪಡೆದು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ಮಳಲಿ ಮೊಗರು ಗ್ರಾಮ ನಿವಾಸಿ ಹಸನಬ್ಬ ಅಲಿಯಾಸ್ ನೌಶಾದ್(30) ಎಂಬಾತನನ್ನು ಬಜ್ಪೆ ಪೊಲೀಸರು ಗುರುವಾರ ಕಾಪುವಿನಲ್ಲಿ ಬಂಧಿಸಿದ್ದಾರೆ.
2013ರ ಮಾ.22ರಂದು ಮೊಗರು ಗ್ರಾಮದ ಕುಕ್ಕಟ್ಟೆ ಎಂಬಲ್ಲಿ ಅಜರುದ್ಧೀನ್ ಮತ್ತು ಹಸನಬ್ಬ ಅಲಿಯಾಸ್ ನೌಶಾದ್ ಎಂಬುವರು ಮಹಿಳೆಯೊಬ್ಬರ ಚೂಡಿದಾರದ ಶಾಲು ಎಳೆದು ಮಾನಭಂಗ ಮಾಡಿದ್ದರು. ಪ್ರಕರಣ ದಾಖಲಾಗಿ ಇಬ್ಬರೂ ಬಂಧನಕ್ಕೊಳಗಾಗಿದ್ದರು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದ ಆರೋಪಿಗಳು ಪ್ರಕರಣ ಹಿಂಪಡೆಯದಿದ್ದರೆ ಕೊಲ್ಲುವುದಾಗಿ ಮಹಿಳೆಗೆ ಬೆದರಿಕೆಯೊಡ್ಡಿದ್ದರು. ಅಲ್ಲದೆ 13 ವರ್ಷದಿಂದ ಹಸನಬ್ಬ ಕೋರ್ಟ್ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ಮಧ್ಯೆ ಹಸನಬ್ಬ ವಿಳಾಸ ಬದಲಿಸಿ ಕಾಪುವಿನಲ್ಲಿ ವಾಸ್ತವ್ಯ ಆರಂಭಿಸಿದ್ದು, ಮಾಹಿತಿ ಪಡೆದ ಬಜ್ಪೆ ಪೊಲೀಸ್ ನಿರೀಕ್ಷಕ ಪ್ರಕಾಶ್, ಎಎಸ್‌ಐ ರಾಮ ಪೂಜಾರಿ ಅವರ ತಂಡ ಕಾಪುವಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕೋರ್ಟ್ ಆದೇಶದಂತೆ ಸದ್ಯ ಆರೋಪಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದಾನೆ. ಆತನ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 5ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.