ವಾಜಮಂಗಲದಲ್ಲಿ ಅಂಬೇಡ್ಕರ್ ಭಾವಚಿತ್ರ ವಿರೂಪ : ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

protest
Published on

ಮೈಸೂರು: ತಾಲೂಕಿನ ವಾಜಮಂಗಲದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ವಾಜಮಂಗಲ ಗ್ರಾಮದಿಂದ ಮೈಸೂರಿನ ಸಿದ್ಧಾರ್ಥನಗರದ ಬುದ್ಧ ಪ್ರತಿಮೆವರೆಗೆ ಸಾವಿರಾರು ಜನರು ಬಿಸಿಲನ್ನು ಲೆಕ್ಕಿಸದೆ ಪಾದಯಾತ್ರೆ ನಡೆಸಿದರು. ವಾಜಮಂಗಲ ಗ್ರಾಮದಲ್ಲಿ ಏ.14 ರಂದು ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಇದಾದ ನಾಲ್ಕು ದಿನಗಳ ನಂತರ ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ. ಘಟನೆ ನಡೆದು 12 ದಿನ ಕಳೆದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಪೊಲೀಸ್ ಇಲಾಖೆ ವೈಫಲ್ಯ ಹಾಗೂ ಜಿಲ್ಲಾಡಳಿತದ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂದು ಅಂಬೇಡ್ಕರ್ ಹೋರಾಟ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಪ್ರಕರಣಗಳಲ್ಲಿ ಆರೋಪಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚುವ ಪೊಲೀಸರು ಅಂಬೇಡ್ಕರ್ ಅವಮಾನಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಏತಕ್ಕೆ ನಿರ್ಲಕ್ಷೃ ತೋರುತ್ತಿದ್ದಾರೆ. ಇದರ ಹಿಂದೆ ಯಾವ ಬಲಾಢ್ಯ ಶಕ್ತಿಗಳು ಇದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಆರೋಪಿಗಳನ್ನು ಕೂಡಲೇ ಬಂಧಿಸದೆ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಲಾಯಿತು.

ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಜಿ. ಲಕ್ಷ್ಮೀಕಾಂತ್ ರೆಡ್ಡಿ ಘಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದ್ದು, ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಪುರುಷೋತ್ತಮ್, ಬೆಟ್ಟಯ್ಯಕೋಟೆ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಹಾರೋಹಳ್ಳಿ ಸುರೇಶ್, ಮಲ್ಲಹಳ್ಳಿ ನಾರಾಯಣ, ಬನ್ನಳ್ಳಿ ಸೋಮಣ್ಣ, ಸಿದ್ಧಸ್ವಾಮಿ, ವಿಜಯ ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net