ಮೊಳಕೆಯೊಡೆದ ಪೈರಿಗೆ ಚಿಗರೆ ಕಾಟ

deer threat to the Sprouted plant
Published on

ಸವಣೂರ: ಮುಂಗಾರು ಬಿತ್ತನೆ ಮಾಡಿರುವ ರೈತರಿಗೆ ಸಂಕಷ್ಟ ಎದುರಾಗಿದ್ದು, ಬಿತ್ತನೆ ಮಾಡಿದ ಜಮೀನಿಗೆ ಚಿಗರೆಗಳು ದಾಳಿ ಮಾಡಿ ಪೈರನ್ನು ತಿಂದು ಹಾಕುತ್ತಿವೆ.

ತಾಲೂಕಿನ ಮಂತ್ರೋಡಿ, ಹೊಸ ನೀರಲಗಿ, ಜೇಕಿನಕಟ್ಟಿ, ಕಾರಡಗಿ, ಚಿಲ್ಲೂರ, ಬಡ್ನಿ, ತೆಗ್ಗಿಹಳ್ಳಿ, ಬರದೂರ, ತೊಂಡೂರ, ಹುರಳಿಕುಪ್ಪಿ ಸೇರಿದಂತೆ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಸೋಯಾಬಿನ್, ಶೇಂಗಾ, ಗೋವಿನಜೋಳ, ಹೆಸರು, ತೊಗರಿ, ಹತ್ತಿ, ಅಲಸಂದಿ ಸೇರಿದಂತೆ ಇತರ ಬೆಳೆ ಬಿತ್ತನೆ ಮಾಡಲಾಗಿದೆ. ಈ ಬೀಜಗಳು ಮೊಳಕೆಯೊಡೆದು ಸಸಿಗಳು ಭೂಮಿಯ ಮೇಲೆ ಕಾಣಿಸುವಷ್ಟರಲ್ಲಿಯೇ ಚಿಗರೆ ಹಿಂಡು ಹೊಲಗಳಿಗೆ ನುಗ್ಗುತ್ತಿವೆ. ಮೊಳಕೆಯೊಡೆದ ಬೀಜ ಹಾಗೂ ಸಸಿಗಳನ್ನು ತಿಂದು ಹಾಗೂ ತುಳಿದ ಹಾಳು ಮಾಡುತ್ತಿವೆ. ಹೀಗಾಗಿ, ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

ತಾಲೂಕಿನ ಒಟ್ಟು 44 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಶೇ. 40ಕ್ಕೂ ಹೆಚ್ಚಿನ ಕೃಷಿಭೂಮಿಗೆ ಚಿಗರೆ ಕಾಟ ಎದುರಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲ ಹದಗೊಳಿಸಿ ಬಿತ್ತಿದ ಬೆಳೆಯನ್ನು ಚಿಗರೆಗಳು ನಾಶಪಡಿಸುತ್ತಿವೆ. ಪ್ರತಿವರ್ಷ ಬಿತ್ತನೆ ನಂತರ ಚಿಗರೆಗಳ ಹಾವಳಿ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.

ಪರಿಹಾರ ನೀಡಲು ಆಗ್ರಹ: ಪ್ರಾಣಿಗಳಿಂದ ರೈತರ ಬೆಳೆ ನಾಶವಾದಲ್ಲಿ ಅರಣ್ಯ ಇಲಾಖೆ ಪರಿಹಾರ ನೀಡಲು ಅವಕಾಶವಿದೆ. ಆದರೆ, ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿಲ್ಲ. ಸರ್ಕಾರ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಚಿಗರೆ ಸೇರಿದಂತೆ ಪ್ರಾಣಿಗಳ ಕಾಟಕ್ಕೆ ರೈತರು ನಿತ್ಯ ಪರದಾಡುವಂತಾಗಿದೆ. ಮೊಳಕೆ ಒಡೆದಿರುವ ಬೀಜವನ್ನು ಚಿಗರೆ ಹಿಂಡು ಸಂಪೂರ್ಣ ಹಾಳು ಮಾಡುತ್ತಿವೆ. ಇದರಿಂದ ರೈತರು ಹಾನಿ ಅನುಭವಿಸುವಂತಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕೈಗೊಂಡು ರೈತರಿಗೆ ಪರಿಹಾರ ಘೊಷಣೆ ಮಾಡಬೇಕು. | ಬಾಪುಗೌಡ ಕೊಪ್ಪದ, ಮಂತ್ರೋಡಿ ರೈತ ಚಿಗರೆ ಸಂತತಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆ ಹಾನಿ ತಡೆಯಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ರೈತರು ಹೊಲಗಳಲಿಗೆ ತಂತಿ ಬೇಲಿ ಹಾಕಲು ಮುಂದಾದಲ್ಲಿ ಇಲಾಖೆ ವತಿಯಿಂದ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಿದಲ್ಲಿ ಸಮೀಕ್ಷೆ ಕೈಗೊಂಡು ಪರಿಹಾರ ನೀಡಲಾಗುವುದು. | ರವಿ ಪುರಾಣಿಕಮಠ ಆರ್​ಎಫ್​ಒ, ದುಂಡಸಿ ಅರಣ್ಯ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net