ತಾವರೆಕೆರೆಯಲ್ಲಿ ಜಿಂಕೆ ಪ್ರತ್ಯಕ್ಷ

Nandagudi 1 rm Jinke
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ

ಕೆಲವು ತಿಂಗಳ ಹಿಂದಷ್ಟೇ ಹೊಸಕೋಟೆ ನಗರದಲ್ಲಿ ಜಿಂಕೆಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿತ್ತು. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಜಿಂಕೆಯನ್ನು ರಕ್ಷಣೆ ಮಾಡಿದ್ದರು. ಮಂಗಳವಾರ ಮತ್ತೊಂದು ಜಿಂಕೆ ನಂದಗುಡಿಯಲ್ಲಿ ಪ್ರತ್ಯಕ್ಷವಾಗಿದ್ದು, ಕಾಡಿನಲ್ಲಿರಬೇಕಾದ ಜಿಂಕೆಗಳು ನಗರ, ಗ್ರಾಮಗಳ ಕಡೆ ಹೆಜ್ಜೆ ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಶ್ಚರ್ಯದ ಜತೆಗೆ ಚರ್ಚೆಗೆ ಗ್ರಾಸವಾಗಿದೆ.

ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ಮಧ್ಯಾಹ್ನದ ಸಮಯದಲ್ಲಿ ಜಿಂಕೆಯೊಂದು ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ಸಾಮಾನ್ಯವಾಗಿ ಕಾಡಂಚಿನ ಗ್ರಾಮಗಳಲ್ಲಿ ಕರಡಿ ಹಾಗೂ ಚಿರತೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ ಆದರೆ. ಜಿಂಕೆಗಳು ಕಂಡುಬರುತ್ತಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

ನಾಯಿಗಳು ಅಟ್ಟಾಡಿಸಿದವು: ಮಂಗಳವಾರ ಮಧ್ಯಾಹ್ನ 1.30ಗಂಟೆ ಸಮಯದಲ್ಲಿ ದಿಢೀರನೆ ಕಾಣಿಸಿಕೊಂಡ ಜಿಂಕೆ ರಾಷ್ಟ್ರೀಯ ಹೆದ್ದಾರಿ 75 ಮೇಲ್ಸೆತುವೆ ಮೇಲೆಗಡೆಯಿಂದ ಕೆಳಗೆ ಜಿಗಿದು ದಿಕ್ಕಾಪಾಲಾಗಿ ಓಡಲಾರಂಭಿಸಿತು. ಇದನ್ನು ಕಂಡ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋದವು. ಈ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ಜಿಂಕೆ ರಕ್ಷಣೆಗೆ ಮುಂದಾದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ, ಸ್ವಲ್ಪ ಎಚ್ಚರ ತಪ್ಪಿದ್ದರೂ ಜಿಂಕೆ ಬೀದಿನಾಯಿಗಳ ಪಾಲಾಗುತ್ತಿತ್ತು ಎನ್ನಲಾಗಿದೆ.

ಗ್ರಾಮದ ಪಕ್ಕದಲ್ಲೇ ಅರಣ್ಯ: ತಾವರೆಕೆರೆ ಗ್ರಾಮದ ಪಕ್ಕದಲ್ಲಿ ಅರಣ್ಯ ಪ್ರದೇಶವಿದ್ದು ಇದರಲ್ಲಿ ಸಾಕಷ್ಟು ಜಿಂಕೆಗಳು, ಕಾಡು ಹಂದಿಗಳು ಹಾಗೂ ನವಿಲುಗಳ ವಾಸಸ್ಥಾನವಾಗಿದೆ. ಆದರೆ ಎನ್‌ಎಚ್-75 ಹೆದ್ದಾರಿ ಇರುವುದರಿಂದ ಆಹಾರ ನೀರು ಅರಸಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಾಣಿಗಳು ಹೋಗುವ ವೇಳೆ ಈ ರೀತಿ ದಾರಿ ತಪ್ಪುತ್ತವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಗುಂಪು ಗುಂಪಾಗಿ ಸಾಗುವ ಜಿಂಕೆಗಳು ಕೆಲವು ಸಂದರ್ಭದಲ್ಲಿ ನೀರು ಮೇವು ಅರಸಿ ಗುಂಪಿನಿಂದ ಬೇರ್ಪಡುವ ಸಾಧ್ಯತೆ ಇರುತ್ತದೆ, ದಾರಿ ತಪ್ಪಿ ಗ್ರಾಮಗಳತ್ತ ನುಗ್ಗುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಾಲಾ ಕೊಠಡಿಯಲ್ಲಿ ಜಿಂಕೆ ರಕ್ಷಣೆ: ಏಕಾಏಕಿ ನಾಯಿಗಳು ಅಟ್ಟಿಸಿಕೊಂಡ ಬಂದ ಹಿನ್ನೆಲೆಯಲ್ಲಿ ಗಾಬರಿಗೊಂಡ ಜಿಂಕೆ ಜನಸಂದಣಿ ಮಧ್ಯೆಯೇ ದಿಕ್ಕಾಪಾಲಾಗಿ ಓಡುತ್ತಿತ್ತು. ನಾಯಿಗಳ ಹಿಡಿತಕ್ಕೆ ಸಿಗದಂತೆ ಓಡುತ್ತಿದ್ದ ಜಿಂಕೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿತ್ತು. ಅದನ್ನು ಹಿಂಬಾಲಿಸಿಕೊಂಡು ನಾಯಿಗಳು ನುಗ್ಗಿದ್ದವು. ತಕ್ಷಣ ಎಚ್ಚೆತ್ತ ಸ್ಥಳೀಯರು ಜಿಂಕೆಯನ್ನು ಶಾಲಾ ಕೊಠಡಿಯೊಂದರಲ್ಲಿ ಕೂಡಿಹಾಕಿ ಬೀದಿನಾಯಿಗಳನ್ನು ಓಡಿಸುವಲ್ಲಿ ಯಶಸ್ವಿಯಾದರು.

ಅಧಿಕಾರಿಗಳಿಗೆ ಮಾಹಿತಿ: ಜಿಂಕೆಯನ್ನು ಶಾಲಾ ಕೊಠಡಿಯಲ್ಲಿ ರಕ್ಷಣೆ ಮಾಡಿದ ಬಳಿಕ ಹೊಸಕೋಟೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಲಾಯಿತು. ತಾಲೂಕಿನ ಅರಣ್ಯಾಧಿಕಾರಿ ಎಸ್.ವಿ.ವರುಣ್‌ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಜಿಂಕೆಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ವಾಹನದಲ್ಲಿ ಕರೆದೊಯ್ದರು.

ಪ್ರಾಥಮಿಕ ಚಿಕಿತ್ಸೆ ಇಲ್ಲ:ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯ ಕಾಲುಗಳು ಸೇರಿ ಕೆಲವು ಕಡೆ ಗಾಯಗಳಾಗಿದ್ದವು. ಆದರೆ ಅರಣ್ಯ ಸಿಬ್ಬಂದಿ ಜಿಂಕೆಯನ್ನು ವಶಕ್ಕೆ ಪಡೆದ ಬಳಿಕ ಸ್ಥಳದಲ್ಲಿ ಯಾವುದೇ ಪ್ರಥಮ ಚಿಕಿತ್ಸೆ ನೀಡಲಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಕೊಡಲು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net