

ಸವಣೂರ: ಬೀದಿನಾಯಿಗಳ ದಾಳಿಗೆ ಸಾರಂಗ(ಚಿಗರೆ)ಯೊಂದು ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ಹೊರವಲಯದ ನವನಗರದ ಅಂಚಿನಲ್ಲಿರುವ ಹೊಲಗಳಿಗೆ ಚಿಗರೆ ಹಿಂಡು ಆಗಾಗ ಬರುತ್ತವೆ. ಈ ಹಿಂಡಿನಲ್ಲಿನ ಚಿಗರಿಯೊಂದು ನಗರಕ್ಕೆ ಬಂದು ಬೀದಿನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟಿದೆ. ಬೀದಿನಾಯಿಗಳು ಅಟ್ಟಾಡಿಸಿ ಕಚ್ಚಿ ತೀವ್ರ ಗಾಯಗೊಳಿಸಿದ್ದರಿಂದ ಭಯಗೊಂಡು ಚಿಗರೆ ಪ್ರಾಣ ಬಿಟ್ಟಿದೆ. ಸ್ಥಳೀಯರು ಕೂಡಲೇ ದುಂಡಸಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ವೀರಭದ್ರಪ್ಪ ಕಾಡಶೆಟ್ಟಿಹಳ್ಳಿ, ಗಸ್ತು ಅರಣ್ಯ ಪಾಲಕ ಸಿ.ಬಿ. ಪೂಜಾರ, ಚಿಗರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಬೀದಿನಾಯಿಗಳ ಹಾವಳಿ ನಿಯಂತ್ರಣ ಕುರಿತು ಹತ್ತು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ಕಂಡುಬರುತ್ತಿಲ್ಲ ಎಂದು ಸ್ಥಳೀಯರಾದ ಪ್ರವೀಣ ಅರ್ಕಸಾಲಿ, ಹನುಮಂತ ಕಲಾಲ, ಪ್ರವೀಣ ಜಮಾದಾರ ಇತರರುಆಕ್ರೋಶ ವ್ಯಕ್ತಪಡಿಸಿದರು.