

ಹನೂರು : ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶುಕ್ರವಾರ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ದೀಪೋತ್ಸವ ಆಚರಣೆಯ ಜತೆಗೆ ಸಿದ್ದಪ್ಪಾಜಿ ಕಂಡಾಯ ಉತ್ಸವದ ಮೆರವಣಿಗೆಯೂ ವಿಜೃಂಭಣೆಯಿಂದ ಜರುಗಿತು.
ಇದರ ಅಂಗವಾಗಿ ಗ್ರಾಮದ ಬೀದಿಗಳನ್ನು ತಳೀರು ತೋರಣದಿಂದ ಸಿಂಗರಿಸಲಾಗಿತ್ತಲ್ಲದೇ ವಿವಿಧ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಚಿಕ್ಕಲ್ಲೂರು ಸಿದ್ದಪ್ಪಾಜಿ ಕಂಡಾಯವನ್ನು ಕರೆಸಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಬಡಾವಣೆಗಳಲ್ಲಿ ಸಂಚರಿಸುವುದರ ಮೂಲಕ ಕಂಡಾಯ ಉತ್ಸವ ನೆರವೇರಿಸಲಾಯಿತು. ಈ ವೇಳೆ ಪ್ರತಿ ಕುಟುಂಬದಿಂದ ಮಹಿಳೆಯರು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರು. ದೇವರ ಗುಡ್ಡರಿಗೆ ನಮಿಸಿ ಆಶೀರ್ವಾದ ಪಡೆದರು.
ಯುವಕರು ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸಂಜೆ 7ರ ವೇಳೆಯಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಜಗುಲಿಕಟ್ಟೆಯಲ್ಲಿ ಸಾವಿರದ ಒಂದು ಅಣತೆಯನ್ನು ಬೆಳಗಿಸಿ ದೀಪೋತ್ಸವದಲ್ಲಿ ಭಾಗಿಯಾಗಿದರು.
ಗ್ರಾಪಂ ಸದಸ್ಯರಾದ ನಾಗಯ್ಯ, ತಮ್ಮರಾಜು, ಮುಖಂಡರಾದ ನಿಂಗರಾಜು, ಕೆಲ್ಲಪ್ಪ, ಶಿವಮಲ್ಲು, ಹುಚ್ಚಿರಯ್ಯ, ಮರಿಸ್ವಾಮಿ, ಶಿವಸ್ವಾಮಿ ಇತರರು ಇದ್ದರು.