ಸುಜ್ಞಾನದ ಬೆಳಕಿನಲ್ಲಿ ಎಲ್ಲರೂ ಸಾಗೋಣ

17arsph1ep
Published on

ಅರಸೀಕೆರೆ: ಸುಜ್ಞಾನದ ಬೆಳಕಿನಲ್ಲಿ ಎಲ್ಲರೂ ಸಾಗುವ ಸಂಕಲ್ಪ ಮಾಡೋಣ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಡಾ.ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಹಾರನಹಳ್ಳಿ ಕೋಡಿಮಠದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಜನಜಾಗೃತಿ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಧರ್ಮ, ಸತ್ಯ ಹಾಗೂ ಪ್ರಾಮಾಣಿಕ ಮಾರ್ಗದಲ್ಲಿ ಅತ್ಯುನ್ನತ ಸಾಧನೆ ಮತ್ತು ಸಮಾಜ ಸೇವೆ ಮಾಡಿರುವ ಕೋಡಿಮಠ ಅಕ್ಷರ, ಅರಿವೆ, ಅನ್ನದಾಸೋಹದ ಮೂಲಕ ಜನಮನದ ಕತ್ತಲನ್ನು ಕಳೆದಿದೆ. ಕಾಯಕ ಸಂಸ್ಕೃತಿ ರೂಢಿಸಿದೆ. ಇದಕ್ಕೆ ಕ್ಷೇತ್ರದಲ್ಲಿ ಇಂದು ಬೆಳಗಿರುವ ಲಕ್ಷ ದೀಪಗಳೇ ಸಾಕ್ಷಿ ಎಂದರು.ಆನೆಯನ್ನು ಪಳಗಿಸಲು ಅಂಕುಶವಿದ್ದಂತೆ ಮಾನವರ ಮನವನ್ನು ಸನ್ಮಾರ್ಗದತ್ತ ಸಾಗಿಸಲು, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸಲು ಜ್ಯೋತಿ ಇದೆ. ಎಲ್ಲರ ಮನದಲ್ಲಿ ದೀಪ ಬೆಳಗುವ ಕಾಯಕದಲ್ಲಿ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಉದ್ಯಮಿ ಸುನಂದಮ್ಮ ದೀಪ ಬೆಳಗುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೋಣಿಬೀಡುಶ್ರೀ ಸಿದ್ದಲಿಂಗ ಸ್ವಾಮೀಜಿ, ಮಾಡಾಳು ವಿರಕ್ತ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಯಳನಡು ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೋಡಿಮಠದ ಉತ್ತರಾಧಿಕಾರಿ ಚೇತನ ಮರಿದೇವರು, ಕೋಳಗುಂದದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net