

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ಮೂರು ವರ್ಷದ ಹಿಂದೆ ಅತ್ತಿಬೆಲೆ ಗಡಿಯಲ್ಲಿ ನಡೆದ ಪಟಾಕಿ ದುರಂತ, ಇತ್ತೀಚಿಗೆ ಗಣೇಶ ಮೂರ್ತಿ ಮೆರವಣಿಗೆ ವೇಳೆ ಸಂಭವಿಸಿದ ದುರ್ಷಟನೆ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತ ಈ ಬಾರಿ ಕಟ್ಟುನಿಟ್ಟಿನ ನಿಯಮ ರೂಪಿಸಿ ಅಧಿಕಾರಿಗಳನ್ನು ಅಲರ್ಟ್ ಮಾಡಿದೆ.
ಪ್ರತಿ ಬಾರಿ ಜಿಲ್ಲಾಡಳಿತ ರೂಪಿಸುವ ಪಟಾಕಿ ನಿಯಮಗಳು ನಂತರದಲ್ಲಿ ಠುಸ್ ಆಗುತ್ತವೆ ಎಂಬ ಆರೋಪ ಕೇಳಿಬರುತ್ತಿರುತ್ತದೆ, ಈ ಬಾರಿ ಪಟಾಕಿ ನಿಯಮಗಳು ಠುಸ್ ಆಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ರವಾನಿಸಿದೆ.
ಹೆಚ್ಚು ಶಬ್ಧದ ಪಟಾಕಿ ನಿಷೇಧ: ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಹಾಗೂ ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಅಂಥ ಪಟಾಕಿಗಳನ್ನು ಬಳಸುವುದು ಸಂಪೂರ್ಣ ನಿಷೇಧಿಸಲಾಗಿದೆ, ದೀಪಾವಳಿ ಹಬ್ಬವನ್ನು ಹಣತೆಗಳ ಮೂಲಕ ಸಂಭ್ರಮದಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಕರೆ ನೀಡಿದ್ದು ಸಾರ್ವಜನಿಕರು ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದು ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ರವಾನಿದ್ದಾರೆ.
4 ತಾಲೂಕಿನಿಂದ 75 ಅರ್ಜಿ: ಪಟಾಕಿ ಮಾರಾಟ ಮಳಿಗೆ ತೆರೆಯಲು ಜಿಲ್ಲಾಡಳಿತ ಹಲವು ನಿಯಮಗಳನ್ನು ರೂಪಿಸಿದ್ದು, ಪ್ರಸ್ತುತ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ 75 ಅರ್ಜಿಗಳು ಬಂದಿವೆ. ಪೊಲೀಸ್ ಇಲಾಖೆ, ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಪುರಸಭೆ, ಬೆಸ್ಕಾಂ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮತಿ ನೀಡಬೇಕಿದೆ. ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ತಾಲೂಕು ಮಟ್ಟದಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಪರವಾನಿಗೆ ನೀಡಲು 5 ಸಮಿತಿ ರಚಿಸಿದೆ. ಆ ಸಮಿತಿಗಳಲ್ಲಿ ಆಯಾ ತಾಲೂಕು ತಹಸೀಲ್ದಾರ್, ಆರಕ್ಷಕ ನಿರೀಕ್ಷಕರು, ತಾಪಂ ಇಒ, ಪೌರಾಯುಕ್ತರು, ಅಗ್ನಿಶಾಮಕ ಅಧಿಕಾರಿ, ಬೆಸ್ಕಾಂ ಅಧಿಕಾರಿ, ಪರಿಸರ ಅಧಿಕಾರಿಗಳಿದ್ದು ಜಂಟಿಯಾಗಿ ಪರಿಶೀಲಿಸಿದ ನಂತರವೇ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಸಿಗಲಿದೆ.
ಕ್ರೀಡಾಂಗಣಗಳಲ್ಲಿ ಅನುಮತಿ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಕ್ರೀಡಾಂಗಣಗಳನ್ನು ಪಟಾಕಿ ಮಾರಾಟ ಮಳಿಗೆಗೆ ಬಳಸುವಂತೆ ತಿಳಿಸಲಾಗಿದೆ, ಅಲ್ಲದೆ ನಗರದ ವಸತಿ ಪ್ರದೇಶದಿಂದ ದೂರವಿರುವ ಜಾಗಗಳಲ್ಲಿ ಪಟಾಕಿ ಮಾರಾಟ ಮಳಿಗೆ ತೆರೆಯುವಂತೆ ಸೂಚನೆ ನೀಡಲಾಗಿದೆ.
24 ಗಂಟೆ ಕರ್ತವ್ಯ: ದೀಪಾವಳಿ ಹಬ್ಬದ ವೇಳೆ ಪಟಾಕಿ ದುರಂತಗಳನ್ನು ನಿರ್ವಹಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲಿಯಾದರೂ ಅಗ್ನಿಅವಘಡ ಸಂಭವಿಸಿದರೆ ತುರ್ತಾಗಿ ತಲುಪುವಂತೆ ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧವಾಗಿರಬೇಕು ಅದೇ ರೀತಿ ಪಟಾಕಿ ಅವಘಡಗಳು ಸಂಭವಿಸಿದರೆ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸಜ್ಜಾಗಿರಬೇಕು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಟ್ಟಗಾಯ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂದು ಜಿಲ್ಲಾಡಳಿತ ಅದೇಶಿಸಿದೆ.
ರಾತ್ರಿ 10ರ ಬಳಿಕ ನಿಷೇಧ: ದೀಪಾವಳಿ ಹಬ್ಬದ ದಿನದಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶ್ಯಬ್ಧ ವಲಯಗಳೆಂದು ಘೋಷಿಸಲ್ಪಟ್ಟಿರುವ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಯಾವುದೇ ಶಬ್ಧ ಉಂಟು ಮಾಡುವ ನಿಷೇಧಿತ ಪಟಾಕಿಗಳನ್ನು ಬಳಸಬಾರದು, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪಟಾಕಿ ಮಾರಾಟದ ಪರವಾನಗಿ ಪಡೆದಿರುವ ಮಾಲೀಕರು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಖುದ್ಧು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕಿದೆ.
ಡೆಸಿಬಲ್ ತಪಾಸಣೆ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಡೆಸಿಬಲ್ ಮಾಪನ ವಾಹನಗಳನ್ನು ನಿಯೋಜಿಸಲಾಗಿದ್ದು, ಈಗಾಗಲೇ ಅಧಿಕಾರಿಗಳು ತಾಲೀಮು ಆರಂಭಿಸಿದ್ದಾರೆ. ನಗರ ಪ್ರದೇಶಗಳಲ್ಲಿ ವಾಹನಗಳು ಸಜ್ಜಾಗಿ ನಿಂತಿವೆ. ಸುಮಾರು ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಶಬ್ಧವನ್ನು ಗ್ರಹಿಸಿ ದಾಖಲಿಸಲಿದ್ದು, ನಿಯಮ ಮೀರಿದ ಶಬ್ಧ ಹೊಮ್ಮಿದರೆ ಈ ಯಂತ್ರದಲ್ಲಿ ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಮತ್ತು ಪಟ್ಟಣದ ಚಿಕ್ಕ ಚಿಕ್ಕ ಬೀದಿಗಳಲ್ಲಿ ಪಟಾಕಿಗಳನ್ನು, ಬಾಣ ಬಿರುಸುಗಳನ್ನು ಉಪಯೋಗಿಸುವದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಸ್ಪೋಟದಿಂದ ಅಪಾಯಗಳು ಎದುರಾಗುವ ಸಾಧ್ಯತೆ ಇರುವುದರಿಂದ ಪಟಾಕಿಗಳನ್ನು ಮೈದಾನಗಳಲ್ಲಿ ಒಟ್ಟಾಗಿ ಸೇರಿ ಆಚರಿಸುವುದು ಉತ್ತಮ. ದೀಪಾವಳಿ ಹಬ್ಬವನ್ನು ಪಟಾಕಿಗಳನ್ನು ಉಪಯೋಗಿಸದೆ ದೀಪದ ಹಬ್ಬವನ್ನಾಗಿ ಆಚರಿಸಬಹುದು. ಈ ಬಗ್ಗೆ ಜಿಲ್ಲೆಯ ಜನರು ಮುಂದಾಗಬೇಕು ಹಬ್ಬದ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ