

ಉಡುಪಿ: ಜಿಲ್ಲೆಯಾದ್ಯಂತ ಕಳೆದ 2&3 ದಿನಗಳಿಂದ ಸಾಯಂಕಾಲ ನಿರಂತರ ಗುಡುಗು ಸಹಿತ ಮಳೆ ಸುರಿಯುತ್ತಿದ್ದು, ದೀಪಾವಳಿ ಸಂಭ್ರಮಕ್ಕೆ ವರುಣಾಘಾತ ಉಂಟಾಗಿದೆ.
ಭಾರೀ ಮಿಂಚು, ಗುಡುಗು ಸಹಿತ ಮಳೆ ಸುರಿಯುತ್ತಿರುವುದರಿಂದ ವ್ಯಾಪಾರ ವಹಿವಾಟಿಗೂ ಕುತ್ತು ಎದುರಾಗಿದೆ. ಖರೀದಿಗೆ ಬಂದವರೂ ಅಂಗಡಿಗಳಲ್ಲೇ ಗಂಟೆಕಟ್ಟಲೆ ನಿಲ್ಲುವಂತಾಗಿದೆ. ಮನೆಗಳಲ್ಲಿ ರಾತ್ರಿ ವೇಳೆ ಅಂಗಳದಲ್ಲಿ ಪಟಾಕಿ ಸಿಡಿಸುವಂತೆಯೂ ಇಲ್ಲ. ದೀಪ ಹಚ್ಚಿಡುವಂತೆಯೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ.
ವ್ಯಾಪಾರಕ್ಕೂ ಹೊಡೆತ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಳೆಯಿಂದಾಗಿ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಖರೀದಿಗೆ ಮುಗಿಬೀಳುತ್ತಿದ್ದ ರಥಬೀದಿಯಲ್ಲಿ ಮಳೆಯಿಂದಾಗಿ ಜನಸಂಚಾರ ಕಡಿಮೆಯಾಗಿದೆ. ಹೊರ ಜಿಲ್ಲೆಯಿಂದ ಬಂದ ಹೂ, ಹಣ್ಣು ವ್ಯಾಪಾರಸ್ಥರಿಗೆ ಸಾಯಂಕಾಲದವರೆಗೆ ಮಾತ್ರ ವ್ಯಾಪಾರವಾಗುತ್ತಿದೆ. ಭಾರೀ ಮಳೆಯಾಗುತ್ತಿರುವುದರಿಂದ ಬೀದಿಬದಿಯಲ್ಲಿ ಸಂಗ್ರಹಿಸಿದ್ದ ಹೂ ಕೊಳೆತು ಹೋಗುವ ಭೀತಿ ಕಾಡುತ್ತಿದೆ.
299 ಪಟಾಕಿ ಅಂಗಡಿಗಳಿಗೆ ಅನುಮತಿ
ಜಿಲ್ಲೆಯಲ್ಲಿ ಒಟ್ಟು 299 ಪಟಾಕಿ ಅಂಗಡಿಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಉಡುಪಿ ತಾಲೂಕಿನಲ್ಲಿ 92, ಕಾಪುವಿನಲ್ಲಿ 46, ಕಾರ್ಕಳದಲ್ಲಿ 44, ಕುಂದಾಪುರದಲ್ಲಿ 45, ಬ್ರಹ್ಮಾವರದಲ್ಲಿ 42, ಬೈಂದೂರಿನಲ್ಲಿ 6, ಹೆಬ್ರಿಯಲ್ಲಿ 24 ಮಳಿಗೆಗಳಿಗೆ ಹಸಿರು ಪಟಾಕಿ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ.
ತೈಲಾಭ್ಯಂಗ
ಜಿಲ್ಲೆಯ ದೇವಸ್ಥಾನಗಳು, ಮನೆಗಳಲ್ಲಿ ಸೋಮವಾರ ನರಕ ಚತುದರ್ಶಿ ಪ್ರಯುಕ್ತ ಪ್ರಾತ@ ಚಂದ್ರೋದಯ ಕಾಲದಲ್ಲಿ ಎಣ್ಣೆಶಾಸ, ತೈಲಾಭ್ಯಂಗ ಸ್ನಾನ ನಡೆಯಿತು.
ಕೃಷ್ಣಮಠದ ಚಂದ್ರಶಾಲೆಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪರ್ಯಾಯ ಮಠದ ಪಾರುಪತ್ಯಗಾರರು ಎಣ್ಣೆಶಾಸ ಮಾಡಿದರು. ನಂತರ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಗಳಿಗೆ ಹಿರಿಯ ಶ್ರೀಗಳು ಎಣ್ಣೆಶಾಸ ನೆರವೇರಿಸಿದರು.