ಖರೀದಿಗೆ ಮುಗಿಬಿದ್ದ ಜನರು ; ದೀಪಾವಳಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ

3CBP1
Published on

ಚಿಕ್ಕಬಳ್ಳಾಪುರ: ಬೆಲೆ ಏರಿಕೆಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನತೆ ಮುನ್ನಾದಿನವಾದ ಬುಧವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ದುಬಾರಿ ದರ ದೃಷ್ಟಿಯಲ್ಲಿಟ್ಟುಕೊಂಡು ಗ್ರಾಹಕರು ಬಜೆಟ್‌ಗೆ ಅನುಗುಣವಾಗಿ ಚೌಕಾಸಿ ವ್ಯಾಪಾರ ನಡೆಸಿದರು.

ಜಿಲ್ಲಾಕೇಂದ್ರದಲ್ಲಿನ ಸಂತೆ ಮಾರುಕಟ್ಟೆ, ಬಜಾರ್ ರಸ್ತೆ, ಭುವನೇಶ್ವರಿ ವೃತ್ತ, ಹೊಸ ಖಾಸಗಿ ಬಸ್ ನಿಲ್ದಾಣ ಸೇರಿ ಹಲವೆಡೆ ಮಾವು, ಬಾಳೆದಿಂಡು, ಹೂವು ಹಣ್ಣು ಸೇರಿ ಇತರ ಸಾಮಗ್ರಿಗಳ ಖರೀದಿಯ ದೃಶ್ಯ ಕಂಡುಬಂತು. ದೀಪಾವಳಿಯಂದು ದೇವರಿಗೆ ಪೂಜೆ ಸಲ್ಲಿಸಿ, ನೋಮು ದಾರಗಳನ್ನು ಕಟ್ಟಿಕೊಳ್ಳುವುದು ಸಂಪ್ರದಾಯ. ಹಾಗೆಯೇ ದೀಪಗಳನ್ನು ಬೆಳಗುವುದು ದೀಪಾವಳಿಯ ವಿಶೇಷ. ಇದನ್ನರಿತು ಎಲ್ಲೆಡೆ ನೋಮುದಾರ, ಮಣ್ಣಿನ ಹಣತೆಗಳನ್ನು ಮಾರಾಟಕ್ಕಿರಿಸಲಾಗಿತ್ತು. ನಗರದ ಬಜಾರ್ ರಸ್ತೆಯಲ್ಲಿ ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಳಿಗೆಗಳು ತಲೆ ಎತ್ತಿದ್ದವು.

ಕೆಲವರು ಮನೆಯಲ್ಲಿ ಕೇದಾರೇಶ್ವರಸ್ವಾಮಿ ವ್ರತಾಚರಣೆ ಮಾಡುತ್ತಾರೆ. ಮತ್ತೆ ಹಲವರು ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಕಳಶ ಮತ್ತು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ಪ್ರತಿ ವರ್ಷದಂತೆ ನಗರದ ಗಂಗಮ್ಮನಗುಡಿಯಲ್ಲಿ ಪೂಜಾ ಕಾರ್ಯಕ್ರಮಗಳಿಗೆ ವಿಶೇಷ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಬೆಳೆಗಾರರಿಗೆ ಬರೆ, ಗ್ರಾಹಕರಿಗೆ ಹೊರೆ: ಹೂವು ಬೆಳೆಗಾರರಿಂದ ಖರೀದಿ, ವ್ಯಾಪಾರಸ್ಥರಿಂದ ಗ್ರಾಹಕರ ಖರೀದಿ ದರದ ನಡುವೆ ಅಜಗಜಾಂತರ ವ್ಯತ್ಯಾಸ ಕಂಡು ಬಂತು. ನಿರ್ವಹಣೆ ವೆಚ್ಚಕ್ಕೆ ಹೋಲಿಸಿದರೆ ಹೂವಿನ ದರ ಕಡಿಮೆ. ಆದರೆ, ಈ ಹಿಂದೆ ಇನ್ನೂ ಬೆಲೆ ಕುಸಿದಿತ್ತು ಎನ್ನುತ್ತಾರೆ ಹೂವು ಬೆಳೆಗಾರರು. ಮತ್ತೊಂದೆಡೆ ಅನಿವಾರ್ಯವಾಗಿ ದುಬಾರಿ ಬೆಲೆ ತೆತ್ತು ಹೂವು ಖರೀದಿಸಿದರು. ಎಪಿಎಂಸಿ ಮಾರುಕಟ್ಟೆಯ ಒಂದೇ ಸ್ಥಳದಲ್ಲಿ ಕೆ.ಜಿ ಗುಲಾಬಿಗೆ 90 ರಿಂದ 130 ರೂಪಾಯಿ, ಮಾರಿಗೋಲ್ಡ್ ಸೇವಂತಿ 160, ಚೆಂಡು ಹೂವು 40 ರೂ ರೈತರಿಗೆ ಸಿಕ್ಕಿದರೆ, ಗ್ರಾಹಕರು ಕೆ.ಜಿ.ಗುಲಾಬಿ 160 ರೂ, ಮ್ಯಾರಿಗೋಲ್ಡ್ ಸೇವಂತಿ 250 ರೂ, ಚೆಂಡು ಹೂವು 70 ರೂಗೆ ಖರೀದಿಸಬೇಕಾಯಿತು.

ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಹೂವಿನ ಬೆಲೆ ಹೆಚ್ಚಾಗಿರುತ್ತದೆ. ಬಳಿಕ ನಿರಂತರ ಕುಸಿತ ಕಂಡು ಬರುತ್ತದೆ. ಒಟ್ಟಾರೆ ಹಬ್ಬಕ್ಕೆ ಆದಾಯ ಬರುತ್ತಿರುವುದು ಖುಷಿಯ ವಿಚಾರ. ಮುನಿರಾಜು, ಹೂವು ಬೆಳೆಗಾರರು ಒಂದೆಡೆ ರೈತರಿಗೆ ಬೆಲೆ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಗ್ರಾಹಕರು ದುಬಾರಿ ಹಣ ತೆರಬೇಕಾಗಿರುವುದು ವಿಪರ್ಯಾಸ. ರಾಜೇಶ್ವರಿ, ಗೃಹಿಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net