

ಬೆಂಗಳೂರು: ಪಟಾಕಿ ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ಮಿಂಟೊ ಕಣ್ಣಿನ ಆಸ್ಪತ್ರೆಯು ದೀಪಾವಳಿ ಹಬ್ಬದ ದಿನಗಳಲ್ಲಿ 24/7 ಸೇವೆ ನೀಡಲು ಸಜ್ಜಾಗಿದೆ.
ಕತ್ತಲೆಯಿಂದ ಬೆಳೆಕಿನೆಗೆಡೆ ಕೊಂಡೊಯ್ಯುವ ಹಬ್ಬ ದೀಪಾವಳಿ. ಆದರೆ, ಆಚರಣೆ ವೇಳೆ ಯಾರೂ ಬೆಳಕಿನಿಂದ ಕತ್ತಲೆಯೆಡೆಗೆ ಹೋಗಬಾರದು. ಈ ನಿಟ್ಟಿನಲ್ಲಿ ಪಟಾಕಿ ಹಚ್ಚುವವರು ಹೆಚ್ಚು ಜಾಗ್ರತೆ ವಹಿಸಬೇಕು. ಎಚ್ಚರತಪ್ಪಿದರೆ ಕಣ್ಣಿಗೆ ಅಪಾಯ ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಎಚ್ಚರಿಸಿದ್ದಾರೆ.
ಹಸಿರು ಪಟಾಕಿಗಳಲ್ಲಿಯೂ ರಾಸಾಯನಿಕಗಳು ಇರುತ್ತವೆ. ಹಾಗಾಗಿ, ಅವುಗಳಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಅಲ್ಲದೆ ಬಹುತೇಕರಿಗೆ ಹಸಿರು ಪಟಾಕಿ ಬಗ್ಗೆಯೂ ಅರಿವಿಲ್ಲ. ಮಾತ್ರವಲ್ಲ ಹಸಿರು ಪಟಾಕಿಗಳಲ್ಲೂ ಶೇ. 50 ರಾಸಾಯನಿಕ ಅಂಶಗಳಿರುತ್ತವೆ. ಹಾಗಾಗಿ ಅವುಗಳಿಂದಲೂ ಕಣ್ಣಿನ ಹಾನಿಯಾಗುತ್ತದೆ. ಪರಿಸರ ಮಾಲಿನ್ಯ ಕಡಿಮೆಯಾಗುತ್ತದಾದರೂ, ಶಬ್ದ ಮತ್ತು ಸ್ಪೋಟದ ತೀವ್ರತೆ ಇತರೆ ಪಟಾಕಿಗಳಷ್ಟೇ ಇರುತ್ತದೆ. ಹಾಗಾಗಿ ಪಟಾಕಿ ಹಚ್ಚಬೇಡಿ ಎಂದು ಹೇಳುವ ಬದಲು ಪಟಾಕಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡುವುದೇ ಒಳಿತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತುರ್ತು ಚಿಕಿತ್ಸೆ ಪಡೆಯಿರಿ:
ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಸಿಡಿಸಿದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆ ಸುಟ್ಟ ಪಟಾಕಿಗಳ ಬಿಸಿ ತುಂಡುಗಳನ್ನು ತುಳಿಯುವುದು ತಪ್ಪಲಿದೆ ಎಂದರು.
ಅಗತ್ಯ ಸಿದ್ಧತೆ:
ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿ ಇರುತ್ತಾರೆ. ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗೆ ಪ್ರತಿವರ್ಷ ಸರಾಸರಿ 50ರಿಂದ 60 ಮಂದಿ ದಾಖಲಾಗುತ್ತಿದ್ದಾರೆ. ಇವರುಗಳಲ್ಲಿ ಶೇ. 40 ಗಾಯಾಳುಗಳು 14 ವರ್ಷದ ಒಳಗಿನವರಾಗಿದ್ದಾರೆ. ಹಾಗಾಗಿ, ಮಕ್ಕಳು ಸೇರಿ ಎಲ್ಲ ವಯೋಮಾನದವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುಜಾತಾ ಸಲಹೆ ನೀಡಿದರು. ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸಹಾಯವಾಣಿ: 9480832430 ಸಂರ್ಪಸಲು ಕೋರಿದರು.
ಸಲಹೆಗಳು
*ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿ ಖರೀದಿಸಿ
*ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ
*ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ
*ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ
*ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
*ಮೈದಾನ, ಖಾಲಿ ಜಾಗಗಳಲ್ಲಷ್ಟೆ ಪಟಾಕಿ ಹಚ್ಚಿ
*ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ
*ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ
*ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ
*ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ
* ಗಾಜು, ಡಬ್ಬ ಇತರೆ ಪಾತ್ರೆಗಳನ್ನು ಇರಿಸಿ ಪಟಾಕಿ ಮತ್ತು ರಾಕೆಟ್ ಹಚ್ಚುವ ಸಾಹಸ ಮಾಡಬೇಡಿ.