ಪಟಾಕಿ ಸದ್ದಿನಲ್ಲಿ ಬೆಳಗಿದ ‘ದೀಪಾ’ವಳಿ

ddddd
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಢಂ.ಢಂ ಪಟಾಕಿ ಸದ್ದಿನ ಜತೆಗೆ ಸಾಲುಸಾಲು ದೀಪಗಳ ಮೆರವಣಿಗೆ ಮೂಲಕ ಮಂಗಳವಾರ ಗ್ರಾಮಾಂತರ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿತ್ತು.

ದೀಪಾವಳಿ ಹಿನ್ನೆಲೆಯಲ್ಲಿ ಸೋಮವಾರಿಂದಲೇ ಅಗತ್ಯ ಸಾಮಗ್ರಿಗಳ ಖರೀದಿ ಜೋರಾಗಿದ್ದು, ಎಲ್ಲೆಡೆ ಭರ್ಜರಿ ವಹಿವಾಟು ನಡೆಯಿತು.ಮಂಗಳವಾರವೂ ಮುಂಜಾನೆಯಿಂದಲೇ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಾಲು ಕಂಡುಬಂತು.

ದೇಗುಲಗಳಲ್ಲಿ ದೀಪಾಲಂಕಾರ: ಗ್ರಾಮೀಣ ಪ್ರದೇಶದ ಗ್ರಾಮದೇವತೆಗಳ ದೇಗುಲಗಳು ಸಾಲುಸಾಲು ಹಣತೆಗಳನ್ನು ಬೆಳಗುವ ಮೂಲಕ ಹಬ್ಬದ ಸಂಭ್ರಮಕ್ಕೆ ಕಾರಣವಾಗಿತ್ತು. ವಿದ್ಯುತ್ ದೀಪಾಲಂಕರಗಳು ಬೆಳಕಿನ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಉಳಿದಂತೆ ನೆಲಮಂಗಲ ತಾಲೂಕು ದಾಬಸ್‌ಪೇಟೆಯಲ್ಲಿನ ಶಿವಗಂಗೆ ದೇಗುಲ, ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯಲ್ಲಿ ಶ್ರೀ ಘಾಟಿಸುಬ್ರಹ್ಮಣ್ಯ ಕ್ಷೇತ್ರ, ಮಧುರೆ ಹೋಬಳಿಯ ಶ್ರೀ ಶನಿದೇವರ ದೇಗುಲ ಸೇರಿ ಜಿಲ್ಲೆಯ ದೇಗುಲಗಳು ದೀಪಗಳ ಬೆಳಕಿನಲ್ಲಿ ಝಗಮಗಿಸುತ್ತಿದ್ದ ದೃಶ್ಯಗಳು ಬೆಳಕಿನ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದವು.

ಕಟ್ಟುನಿಟ್ಟಿನ ನಿಯಮ: ಪ್ರತಿ ವರ್ಷದಂತೆ ಪಟಾಕಿ ವ್ಯಾಪಾರಸ್ಥರು ಮಳಿಗೆ ತೆರೆದಿದ್ದು, ಹಲವು ಕಟ್ಟುನಿಟ್ಟಿನ ನಿಯಮಗಳ ಪಾಲನೆ, ಹೆಚ್ಚಿನ ಬಂಡವಾಳ ಹೂಡಿಕೆಯಲ್ಲಿ ಆದಾಯದ ನಿರೀಕ್ಷೆಯಲ್ಲಿ ವಹಿವಾಟಿನಲ್ಲಿ ತೊಡಗಿದ್ದಾರೆ. ಈ ಬಾರಿ ಜಿಲ್ಲಾಡಳಿತ ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮ ರೂಪಿಸಿ ಹಸಿರು ಪಟಾಕಿ ಮಾರಕ್ಕಷ್ಟೇ ಅನುಮತಿ ಎಂದು ೋಷಿಸಿದ್ದರು. ಹಸಿರು ಪಟಾಕಿ ಎನ್ನುವುದು ಜಾಗೃತಿ ಮಾತಿಗೆ ಸೀಮಿತವಾಗಿದೆ. ಪರಿಸರಕ್ಕೆ ಮಾರಕವಾಗಿರುವ ಪಟಾಕಿಯನ್ನು ರಾಜಾರೋಷವಾಗಿ ಮಾರಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಸುರಕ್ಷತಾ ಕ್ರಮ: 20 ದಿನಗಳಿಂದಲೂ ಪಟಾಕಿ ಮಳಿಗೆ ಸ್ಥಾಪಿಸಲು ವ್ಯಾಪಾರಸ್ಥರು ಸ್ಥಳೀಯ ಆಡಳಿತ ಸಂಸ್ಥೆ, ಪೊಲೀಸ್, ಅಗ್ನಿಶಾಮಕ ದಳ ಸೇರಿ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿದ್ದು, ಪಟಾಕಿ ಮಾರಾಟದ ಸ್ಥಳಗಳಲ್ಲಿ ಸುರಕ್ಷತೆಯ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಸೇರಿ ಅಧಿಕಾರಿಗಳು ಪಟಾಕಿ ಮಳಿಗೆಗಳಲ್ಲಿ ಸುತ್ತುಹಾಕಿ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ಮುಗಿಬಿದ್ದ ಗ್ರಾಹಕರು: ತಾಲೂಕು ಕೇಂದ್ರಗಳ ಮಾರುಕಟ್ಟೆಗಳು, ಸಂತೆ ಮೈದಾನಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿಗಳು ಇತರ ಪರಿಕರಗಳ ಖರೀದಿಗೆ ಗ್ರಾಹಕರು ಮುಗಿ ಬಿದ್ದರು. ಪ್ರಮುಖ ರಸ್ತೆಯ ಬದಿಗಳಲ್ಲಿ ತಾತ್ಕಾಲಿಕ ಅಂಗಡಿಗಳು ತಲೆ ಎತ್ತಿವೆ. ಪ್ರತಿ ವರ್ಷದಂತೆ ಗ್ರಾಹಕರಿಗೆ ಹಬ್ಬದ ಆಚರಣೆಗೆ ದುಬಾರಿ ದರದ ಬಿಸಿ ತಟ್ಟಿದ್ದು ಚೌಕಾಸಿಯಲ್ಲಿ ಖರೀದಿ ಪ್ರಕ್ರಿಯೆ ಕಂಡು ಬರುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಅಂಗಡಿಗಳಲ್ಲಿ ಮುಡಿ ಗೆಜ್ಜೆಗಳು, ನೋಮುದಾರ ಸೇರಿ ವಿವಿಧ ಪರಿಕರಗಳ ಮಾರಾಟದ ದೃಶ್ಯ ಕಂಡು ಬಂತು. ಇದರ ಜತೆಗೆ ಬಾಳೆಕಂದು, ಬೂದುಕುಂಬಳಕಾಯಿಗಳ ಮಾರಾಟವೂ ಭರ್ಜರಿಯಾಗಿತ್ತು. ರಸ್ತೆಬದಿಗಳಲ್ಲಿ ಲೋಡುಗಟ್ಟಲೆ ಬಾಳೆಕಂಬಗಳು, ಬೂದುಕುಂಬಳಕಾಯಿ ರಾಶಿ ಹಾಕಿಕೊಂಡು ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡುತ್ತಿದ್ದರು.

ಸಂಭ್ರಮದ ಪೂಜೆ: ಆಯುಧಪೂಜೆ ಬದಲಿಗೆ ದೀಪಾವಳಿ ಹಬ್ಬದಂದು ಮಳಿಗೆಗಳು ವಾಹನಗಳಿಗೆ ಪೂಜೆ ಮಾಡುವ ಸಂಪ್ರದಾಯ ಮುಂದುವರೆದಿದ್ದು ಮಂಗಳವಾರವೂ ಬಹುತೇಕ ಕಡೆಗಳಲ್ಲಿ ವಾಹನಗಳಿಗೆ, ಅಂಗಡಿಗಳಿಗೆ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಕಂಡುಬಂತು. ಲಕ್ಷ್ಮಿದೇವಿಯ ವಿಗ್ರಹವನ್ನು ಪ್ರತಿಷ್ಟಾಪಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಮೀಣ ಭಾಗದ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿ ಬಂಧುಬಳಗೊಂದಿಗೆ ಪಟಾಕಿ ಸಿಡಿಸಿ ಸಿಹಿ ಔತಣಕೂಟದೊಂದಿಗೆ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು.

ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ: ಜಿಲ್ಲಾಡಳಿತ ಅನುಮತಿ ನೀಢಿದ ಸ್ಥಳಗಳಲ್ಲಿ ಪಟಾಕಿ ಮಾರಾಟ ನಡೆಯಿತು. ಸೋಮವಾರಕ್ಕಿಂತ ಮಂಗಳವಾರ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ಮಾರಾಟ ಕಂಡುಬಂತು. ಮಳಿಗೆಗಳಲ್ಲಿ ಬೆಳಗ್ಗೆಯಿಂದಲೇ ಜನಜಂಗುಳಿ ಏರ್ಪಟ್ಟಿತ್ತು. ಮಳಿಗೆಗಳ ಸಮೀಪವೇ ಬಿಡಿಬಿಡಿಯಾಗಿ ಪಟಾಕಿ ಮಾರಾಟ ಮಾಡುವವರು ಒಂದೆಡೆಯಾದರೆ, ಬಾಕ್ಸ್‌ಗಳಲ್ಲಿ ಪಟಾಕಿ ಮಾರಾಟ ಮಾಡುವ ಮಳಿಗೆಗಳನ್ನು ಪ್ರತ್ಯೇಕವಾಗಿ ಖರೀದಿ ನಡೆಯುತ್ತಿತ್ತು. ಹಸಿರು ಪಟಾಕಿ ಕೇಳಿಪಡೆಯುವ ಮೂಲಕ ಹಲವು ಸಾರ್ವಜನಿಕರು ಪರಿಸರ ಮಾಲಿನ್ಯದ ಜಾಗೃತಿ ಪ್ರದರ್ಶಿಸುತ್ತಿದ್ದ ದೃಶ್ಯಗಳೂ ಕಂಡುಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net