ಬೆಳಕಿನ ಹಬ್ಬಕ್ಕೆ ಸಂಭ್ರಮದ ಸ್ವಾಗತ

dee
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಬೆಳಕಿನ ಹಬ್ಬ ದೀಪಾವಳಿಯನ್ನು ಗ್ರಾಮಾಂತರ ಜಿಲ್ಲೆಯ ಜನರು ಸಂಭ್ರಮದಿಂದ ಸ್ವಾಗತಿಸಿದ್ದಾರೆ, ಢಮ್ ಢಮ್ ಸದ್ದಿನೊಂದಿಗೆ ಪಟಾಕಿ ಸಿಡಿಸುವ ಮೂಲಕ ದೀಪಾವಳಿ ಸದ್ದು ಮಾಡಲಾರಂಭಿಸಿದೆ.

ನಗರ ಸೇರಿ ಗ್ರಾಮೀಣ ಜನರು ದೀಪಾವಳಿ ಹಬ್ಬದ ಸಿದ್ಧತೆ ಜೋರಾಗಿದ್ದು, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯೂ ಪಟಾಕಿ ಸದ್ದಿನಲ್ಲಿ ಎಲ್ಲವೂ ಗೌಣವಾದಂತಾಗಿದೆ.

ಮನೆಗಳ ಮುಂದೆ ತರಹೇವಾರಿ ರಂಗೋಲಿಗಳನ್ನು ಬಿಡಿಸಿ ಸಾಲು ಸಾಲು ಹಣತೆಗಳನ್ನು ಬೆಳಗಿಸುವ ಮೂಲಕ ದೀಪಾವಳಿಗೆ ಕಳೆಕಟ್ಟಿದಂತಾಗಿದೆ. ಭಾನುವಾರದಿಂದಲೇ ನಗರ ಪಟ್ಟಣ ಪ್ರದೇಶಗಳ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಸೇರಿದ್ದ ಗ್ರಾಹಕರು ಹಬ್ಬದ ಸಾಮಾಗ್ರಿ ಖರೀದಿಗೆ ಮುಗಿಬಿದ್ದಿದ್ದ ದೃಶ್ಯ ಕಂಡುಬಂತು. ಇನ್ನು ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ಹಲವು ಹೋಟೆಲ್‌ಗಳಲ್ಲಿ ದೀಪಾವಳಿ ಸ್ಪೆಷಲ್ ಹೆಸರಿನಲ್ಲಿ ವಿಶೇಷ ಭೋಜನದ ಮೂಲಕ ಗ್ರಾಹಕರನ್ನು ಸ್ವಾಗತಿಸಿದವು. ಹೋಟೆಲ್‌ಗಳ ಮುಂದೆ ಹೋಳಿಗೆ ಸಿಹಿಯೊಂದಿಗೆ ಭೂರಿ ಭೋಜನದ ನಾಮಲಕಗಳು ಗಮನ ಸೆಳೆದವು.

ಅಮಾವಾಸ್ಯೆಗೆ ಜೋರು ಹಬ್ಬ: ದೀಪಾವಳಿ ಅವಾವಾಸ್ಯೆ ಅ.21ರ ಮಂಗಳವಾರ ಬಂದಿದೆ. ಅ.20 ನರಕ ಚತುರ್ದಶಿ ಹಾಗೂ ಅ.22 ರಂದು ಬಲಿಪಾಢ್ಯಮಿ ಇದ್ದು, ಬಹುತೇಕರು ಅಮಾವ್ಯಾಸ್ಯೆಯಂದೇ ಹಬ್ಬ ಆಚರಣೆಗೆ ಸಿದ್ಧತೆ ಕೈಗೊಂಡಿದ್ದಾರೆ. ದೀಪಾವಳಿ ಪೂಜೆಗೆ ಗೋಟು ಅಡಿಕೆ, ಹರಿಶಿಣ ಕೊಂಬು, ನೋಮುದಾರಗಳಿಗೆ ಬೇಡಿಕೆ ಹೆಚ್ಚಿದೆ. ನೋಮುದಾರಗಳ ವಾರಾಟಕ್ಕಾಗಿಯೇ ಪ್ರತ್ಯೇಕ ಅಂಗಡಿಗಳು ತಲೆಯೆತ್ತಿವೆ.

ಅಂಗಡಿಗಳ ಪೂಜೆ: ದೀಪಾವಳಿಯಂದು ಕೆಲವರು ಆಯುಧಪೂಜೆ, ಅಂಗಡಿ ಪೂಜೆ, ಲಕ್ಷ್ಮೀಪೂಜೆ ಜೆ ವಾಡುವ ಪದ್ಧತಿಯೂ ಇದೆ, ಆದ್ದರಿಂದಾಗಿ ಹೂವಿನ ಬೆಲೆ ಗಗನಕ್ಕೇರಿದ್ದು, ಹಣ್ಣು ಇನ್ನಿತರ ಹಬ್ಬದ ಸಾಮಾಗ್ರಿಗಳ ದರ ಗಗನಮುಖಿಯಾಗಿದೆ. ಕೆಲವೇ ದಿನಗಳ ಹಿಂದೆ ಇದ್ದ ಹಣ್ಣಿನ ದರ ಹಬ್ಬದ ದಿನವಾದ ಸೋಮವಾರ ದುಪ್ಪಟ್ಟು ದರ ಏರಿಸಿಕೊಂಡಿದ್ದ ಬಗ್ಗೆ ಗ್ರಾಹಕರಲ್ಲಿ ಗುಸುಗುಸು ಸಾಮಾನ್ಯವಾಗಿತ್ತು.ಅಂಗಡಿ ಮುಂಗಟ್ಟುಗಳಿಗೆ ಪೂಜೆ:ಆಯುಧ ಪೂಜೆ ಹಬ್ಬದಂದು ಬಾಕಿ ಉಳಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳ ಪೂಜೆಯನ್ನು ಪಟ್ಟಣ ಪ್ರದೇಶದ ಬಹುಪಾಲು ಮಾಲೀಕರು ಸೋಮವಾರ ಅಚರಿಸಿದರು. ಮುಖ್ಯವಾಗಿ ಜ್ಯುವಲೆರಿ ಅಂಗಡಿಗಳು, ಹಲವು ಕಾರ್ಖಾನೆಗಳೂ, ಗ್ಯಾರೇಜ್, ಬ್ಯಾಂಕ್ ಮತ್ತಿತರ ಕಚೇರಿಗಳಲ್ಲಿ ಹಬ್ಬ ಆಚರಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿ, ದೊಡ್ಡ ದೊಡ್ಡ ಹೂಮಾಲೆಗಳಿಂದ ಅಲಂಕರಿಸಿ ಬಾಳೆಕಂಬಗಳನ್ನಿಟ್ಟು ಪೂಜೆ ನೆರವೇರಿಸಿದ ದೃಶ್ಯ ಕಂಡುಬಂತು. ಹಾಗೆಯೇ ಬಹುಪಾಲು ಜನರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಮಂಕಾದ ಮಣ್ಣಿನ ಹಣತೆ ಮಾರಾಟ ಹಣತೆ ಹಚ್ಚುವವರು ವಿವಿಧ ವಾದರಿಗಳ ಹಣತೆ ಖರೀದಿಯಲ್ಲಿ ತೊಡಗಿದ್ದು, ಆಧುನಿಕತೆ ಭರಾಟೆಯಲ್ಲಿ ಮಣ್ಣಿನ ಹಣತೆ ಕಣ್ಮರೆಯಾಗುತ್ತಿವೆ, ಪಿಂಗಾಣಿಯ ಹಣತೆಗಳ ಕಾರುಬಾರು ಹೆಚ್ಚಾಗಿದೆ. ಮಣ್ಣಿನ ಹಣತೆಗಳು ಗಾತ್ರವಾರು ಡಜನ್‌ಗೆ 60 ರಿಂದ 150 ರೂ.ವರೆಗೆ ವಾರಾಟವಾಗುತ್ತಿದೆ, ನೋಮುದಾರಗಳು ಡಜನ್‌ಗೆ 80 ರಿಂದ 100 ರೂ. ವರೆಗೂ ಬೆಲೆ ಹೆಚ್ಚಿಸಿಕೊಂಡಿವೆ. ಇದರೊಂದಿಗೆ ವಿದ್ಯುತ್ ದೀಪಗಳು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಶೆಲ್‌ಗಳ ದೀಪಗಳನ್ನು ಹೆಚ್ಚು ಕಾಣಿಸಿಕೊಂಡಿವೆ.

ಹಸಿರುಪಟಾಕಿ ಮಾರಾಟ: ಈ ಬಾರಿ ಜಿಲ್ಲಾಡಳಿತ ಪಟಾಕಿ ಮಾರಾಟದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸಿದ್ದು, ಜಿಲ್ಲಾಡಳಿತ ಸೂಚಿಸಿದ ಜಾಗಗಳಷ್ಟೇ ಪಟಾಕಿ ಮಾರಾಟ ಕಂಡುಬರುತ್ತಿರುವ ನಡುವೆಯೂ ಅಲ್ಲಲ್ಲಿ ಕೆಲವು ಅಂಗಡಿಗಳಲ್ಲಿ ಕದ್ದುಮುಚ್ಚಿ ಸಣ್ಣಪುಟ್ಟ ಪ್ಯಾಕೇಟ್‌ಗಳಲ್ಲಿ ಪಟಾಕಿ ಮಾರಾಟ ಕಂಡುಬರುತ್ತಿವೆ. ದೇವನಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಸೋಮವಾರ ಮುಂಜಾನೆಯಿಂದಲೇ ಪಟಾಕಿಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು. ಪರಿಸರ ಮಾಲಿನ್ಯದ ಜಾಗೃತಿ ಪರಿಣಾಮವಾಗಿ ಈ ಬಾರಿ ಹೆಚ್ಚು ಪಟಾಕಿ ಸದ್ದು ಮಾಡುವುದಿಲ್ಲ ಎಂಬ ನಿರೀಕ್ಷೆ ಜಿಲ್ಲಾಡಳಿತದ್ದಾದರೂ ಪಟಾಕಿ ಹಬ್ಬವನ್ನು ಆಚರಿಸಲು ಗ್ರಾಹಕರು ಹಿಂದೇಟು ಹಾಕುವಂತೆ ಕಂಡುಬರುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net