ಯಕ್ಷಗಾನದಲ್ಲಿ ಹೊಸತನ ಪ್ರೇಕ್ಷಕರ ನಿರೀಕ್ಷೆಗೆ ಸ್ಪಂದನೆ ‘ಯಕ್ಷ ದೀಪಕ’ ಉದ್ಘಾಟಿಸಿ,ಕೆ.ಗೋವಿಂದ ಭಟ್ ಆಶಯ

mng-july16-townhall1
Published on

ಮಂಗಳೂರು: ಯಕ್ಷಗಾನದಲ್ಲಿ ಮೂಲ ಪರಂಪರೆಗೆ ಧಕ್ಕೆಯಾಗದಂತೆ ಹೊಸ ಪ್ರಯೋಗಗಳು ನಡೆಯಬೇಕು. ಆಗ ಮಾತ್ರ ಪ್ರೇಕ್ಷಕರ ನಿರೀಕ್ಷೆಗೆ ಸ್ಪಂದನೆ ಸಿಕ್ಕಿದಂತಾಗುತ್ತದೆ ಎಂದು ಯಕ್ಷಗಾನದ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಹೇಳಿದರು.


ಮಂಗಳೂರು ಪುರಭವನದಲ್ಲಿ ಭಾನುವಾರ ಯಕ್ಷಗಾನ ಕಲಾವಿದ ದೀಪಕ್ ರಾವ್ ಪೇಜಾವರ ಅಭಿನಯಿಸಿ, ನಿರ್ದೇಶಿಸಿದ ‘ಹರಿ ದರುಶನ’ ಏಕವ್ಯಕ್ತಿ ನವರೂಪಂನ ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ‘ಯಕ್ಷ ದೀಪಕ’ ಉದ್ಘಾಟಿಸಿ ಅವರು ಮಾತನಾಡಿದರು.


ಕಲಾವಿದ ದೀಪಕ್ ರಾವ್ ಪೇಜಾವರ ಅವರು ಒಂದು ಪ್ರಸಂಗದ ಹಲವು ಪಾತ್ರಗಳನ್ನು ಅಭಿನಯಿಸುವ ಮೂಲಕ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ. ಇಂತಹ ಹೊಸತನವನ್ನು ಇತರೆ ಕಲಾವಿದರೂ ನೀಡುವಂತಾಗಬೇಕು. ಕಲಾವಿದ ತನ್ನ ಅಂತರಂಗದ ಭಾವವನ್ನು ವೀಕ್ಷಕರಿಗೆ ಹೇಗೆ ಪ್ರಸ್ತುತಪಡಿಸುತ್ತಾನೆ ಎಂಬ ಝಲಕ್‌ನ್ನು ದೀಪಕ್ ರಾವ್ ಪೇಜಾವರ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ ಎಂದರು.


ದೀಪಕ್ ರಾವ್ ಪಾತ್ರ ನಿರ್ವಹಿಸಿದ ಹರಿ ದರುಶನ ಏಕವ್ಯಕ್ತಿ ನವರೂಪಂ ಟ್ರೈಲರ್ ಹಾಗೂ ಪೋಸ್ಟರ್‌ನ್ನು ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಉಜಿರೆ ಅಶೋಕ್ ಭಟ್ ಬಿಡುಗಡೆಗೊಳಿಸಿದರು.


ಗುರುವಂದನೆ, ಸನ್ಮಾನ: ಈ ಸಂದರ್ಭ ದೀಪಕ್ ರಾವ್ ಪೇಜಾವರ ಅವರ ಯಕ್ಷಗಾನ ಗುರುಗಳಾದ ಹಿರಿಯ ಕಲಾವಿದ ಪಿ.ವಿ.ಪರಮೇಶ್ ಮತ್ತು ಪಿ.ಸತ್ಯಾನಂದ ರಾವ್ ಪೇಜಾವರ ಇವರಿಗೆ ಗುರುವಂದನೆ ನೆರವೇರಿಸಲಾಯಿತು.


ಯಕ್ಷಗಾನ ಸಾಧಕರ ನೆಲೆಯಲ್ಲಿ ಕಾಟಿಪಳ್ಳ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಾಧವ ಶೆಟ್ಟಿ ಬಾಳ, ಸುರತ್ಕಲ್ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ದಿಲೀಪ್ ಸುವರ್ಣ, ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮಂಡಳಿಯ ರಮೇಶ್ ಕುಲಶೇಖರ, ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ, ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಪರವಾಗಿ ರಾಜೇಂದ್ರ ಕಲ್ಲೂರಾಯ, ಮೋಹಿನಿ ಕಲಾ ತಂಡ ಕಿನ್ನಿಗೋಳಿ, ಹವ್ಯಾಸಿ ಬಳಗ ಕದ್ರಿಯ ಶರತ್ ಕದ್ರಿ, ಸರಯೂ ಯಕ್ಷಗಾನ ಮಂಡಳಿಯ ರವಿ ಅಲೆವೂರಾಯ, ಯಕ್ಷ ಮಂಜೂಷದ ವಿದ್ಯಾ ಕೋಳ್ಯೂರು, ಯಕ್ಷಾರಾಧನಾ ಕಲಾ ಕೇಂದ್ರದ ಸುಮಂಗಲಾ ರತ್ನಾಕರ್ ಇವರನ್ನು ಗೌರವಿಸಲಾಯಿತು.


ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರಿನ ಕೇಂದ್ರ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಬಹರೇನ್ ಉದ್ಯಮಿ, ಅಂಕಣಕಾರ ಕಿರಣ್ ಉಪಾಧ್ಯಾಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಯಕ್ಷಗಾನ ವಿಮರ್ಶಕ ಡಾ.ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ವಾಸುದೇವ ರಂಗಾಭಟ್ ನಿರೂಪಿಸಿದರು.


ಸಮಾರಂಭಕ್ಕೆ ಮುನ್ನ ಕನ್ನಡ ಸಂಘ ಬಹರೇನ್ ಇದರ ಯಕ್ಷೋಪಾಸನ ಯಕ್ಷಗಾನ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಂದ ‘ಗಿರಿಜಾ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಾಟ್ಯಗುರು ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ನಡೆಯಿತು. ಸಮಾರಂಭ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶಶಿಪ್ರಭ ಪರಿಣಯ’ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net