ಧರ್ಮದ ಹೆಸರಿನಲ್ಲಿ ಜನರ ವಿಭಜನೆ ಸಲ್ಲದು ದೀಪಾ ಭಾಸ್ತಿ ಉಪನ್ಯಾಸ

ಅನುವಾದಕಿ ದೀಪಾ ಭಾಸ್ತಿ ಉಪನ್ಯಾಸ ನೀಡಿದರು. ಪ್ರೊ.ಪಿ.ಎಲ್.ಧರ್ಮ, ಡಾ.ಶ್ರೀನಾಥ್ ಎಂ.ಪಿ., ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
ಅನುವಾದಕಿ ದೀಪಾ ಭಾಸ್ತಿ ಉಪನ್ಯಾಸ ನೀಡಿದರು. ಪ್ರೊ.ಪಿ.ಎಲ್.ಧರ್ಮ, ಡಾ.ಶ್ರೀನಾಥ್ ಎಂ.ಪಿ., ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
Published on
ಮಂಗಳೂರು: ದೇಶದಲ್ಲಿರುವ ಪ್ರತಿಯೊಂದು ಧರ್ಮದ ಬಗ್ಗೆ ಅಪಾರ ಗೌರವವಿದೆ. ಆದರೆ ಕೆಲವರು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವುದು ಸರಿಯಲ್ಲ ಎಂದು ಅಂ.ರಾ. ಬುಕರ್ ಪ್ರಶಸ್ತಿ ವಿಜೇತ ಅನುವಾದಕಿ ದೀಪಾ ಭಾಸ್ತಿ ಹೇಳಿದರು.
ಪಿಪಿ ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿವಿ, ಜಿಲ್ಲಾ ಕಸಾಪ, ದ.ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿದ ಪಿ.ಪಿ.ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸದಲ್ಲಿ ಅವರು ಸಭಿಕರ ಜತೆ ಸಂವಾದ ನಡೆಸಿದರು.
ಹಿಂದೂ ಧರ್ಮದಲ್ಲಿ ವೇದ, ಸಂಸ್ಕೃತ ಎಲ್ಲವೂ ಒಳ್ಳೆಯದೇ. ಅದನ್ನು ಯಾವತ್ತೂ ತಪ್ಪು ಎಂದು ನಾನು ಹೇಳಿಲ್ಲ. ಹಿಂದೂ ಧರ್ಮ ಸಮಸ್ಯೆಯೇ ಅಲ್ಲ. ಹಿಂದುತ್ವ ಎನ್ನುವುದು ಸಮಸ್ಯೆ. ಇಸ್ಲಾಂ ಸಮಸ್ಯೆ ಅಲ್ಲ, ಆದರೆ ಕೆಲ ದುಷ್ಟ ಶಕ್ತಿಗಳು ಅದನ್ನು ದುರುಪಯೋಗ ಪಡಿಸುತ್ತಿರುವುದು ಸಮಸ್ಯೆ ಎಂದವರು ಸ್ಪಷ್ಟಪಡಿಸಿದರು.
ಸಂದರ್ಭ ಸಿಕ್ಕರೆ ಧರ್ಮ ಗ್ರಂಥ ಅನುವಾದ
ಆಂಗ್ಲಭಾಷೆಯಲ್ಲಿ ಬರೆಯುವಷ್ಟು ಸಾಮರ್ಥ್ಯ ಕನ್ನಡದಲ್ಲಿ ನನಗಿಲ್ಲ. ಬರೆಯುವ ಆಸೆ ಇದೆ. ಕನ್ನಡಕ್ಕೆ ಹತ್ತಿರ ಆಗಬೇಕೆಂಬ ಉದ್ದೇಶದಿಂದಲೇ ಅನುವಾದಕ್ಕೆ ಮುಂದಾಗಿದ್ದು. ಅನುವಾದದ ಮೂಲಕ ಬಹಳಷ್ಟು ಕನ್ನಡ ಪದಗಳನ್ನು ಉಪಯೋಗಿಸುವ, ನೆನಪಿಸುವ ಅವಕಾಶ ದೊರೆಯಿತು. ಸಾವಿರಾರು ಧಾರ್ಮಿಕ ಗ್ರಂಥಗಳಿವೆ. ಅದನ್ನೆಲ್ಲಾ ನನ್ನ ಒಬ್ಬಳಿಂದ ಅನುವಾದ ಮಾಡಲು ಸಾಧ್ಯವಿಲ್ಲ. ನಾನು ಫುಲ್‌ಟೈಂ ಅನುವಾದಕಿ ಅಲ್ಲ. ಏನೋ ಮಾಡಬೇಕು ಅನ್ನಿಸಿದಾಗ ಅನುವಾದ ಮಾಡುತ್ತೇನೆ. ಹಾಗೆಯೇ ಧಾರ್ಮಿಕ ಗ್ರಂಥಗಳ ಅನುವಾದ ಮಾಡುವುದೇ ಇಲ್ಲ ಎಂಬ ನಿಯಮ ಇಟ್ಟುಕೊಂಡಿಲ್ಲ. ಸಂದರ್ಭ, ಅವಕಾಶ, ಆಸಕ್ತಿ ಬಂದರೆ ಯಾಕೆ ಬರೆಯಬಾರದು. ಸದ್ಯ ಅಂತಹ ಯಾವುದೇ ಆಲೋಚನೆ ಇಲ್ಲ ಎಂದು ಕಸಪಾ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರ ಪ್ರಶ್ನೆಗೆ ದೀಪಾ ಭಾಸ್ತಿ ಪ್ರತಿಕ್ರಿಯಿಸಿದರು.
ಬರವಣಿಗೆಗೆ ಭಾಷೆ ಮುಖ್ಯವಲ್ಲ
ಬರವಣಿಗೆಗೆ ಭಾಷೆ ಮುಖ್ಯ ಆಗದು. ನಮ್ಮ ಭಾಷಾ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಯುವ ಪೀಳಿಗೆಯಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅವರನ್ನು ಫೋನ್ ಬದಿಗೊತ್ತಿ ಪುಸ್ತಕಗಳ ಹವ್ಯಾಸವನ್ನು ಹಚ್ಚಿಸಿಕೊಳ್ಳಬೇಕೆಂದೇನಿಲ್ಲ. ಫೋನ್‌ಗಳಲ್ಲಿ ಕೇಳು ಪುಸ್ತಕ ಸೇರಿದಂತೆ ಹಲವು ರೀತಿಯ ಆಯ್ಕೆಗಳಿವೆ. ಆ ಬಗ್ಗೆಯೂ ಪುಸ್ತಕ ಓದಲು ಯುವ ಪೀಳಿಗೆಯನ್ನು ಪ್ರೇರೇಪಿಸಬಹುದು ಎಂದರು.
ಓದಿದರೆ ಮಾತ್ರ ಬರೆಯಲು ಸಾಧ್ಯ
ಬರೆಯಲು ಆಸಕ್ತಿ ಇದ್ದ ಕೂಡಲೇ ಬರೆಯಲಾಗದು. ಹೆಚ್ಚು ಹೆಚ್ಚು ಓದಿದಾಗ ಆಲೋಚನೆಗಳು, ಹೊಸ ಐಡಿಯಾಗಳು ಬರುತ್ತವೆ. ಓದುವುದಕ್ಕಾಗಿ ಪುಸ್ತಕಗಳನ್ನೇ ನೆಚ್ಚಿಕೊಳ್ಳಬೇಕೆಂದೇನಿಲ್ಲ. ಆಡಿಯೋಗಳ ಮೂಲಕವೂ ಓದಿನ ಗೀಳು ಹಚ್ಚಿಸಿಕೊಳ್ಳಬಹುದು. ಭಾಷೆಯನ್ನು ಭಾಷಣಕ್ಕೆ ಮಾತ್ರ ಸೀಮಿತಗೊಳಿಸದೆ ದಿನನಿತ್ಯದ ಜೀವನದಲ್ಲಿ ಅದನ್ನು ಉಪಯೋಗಿಸಿಕೊಂಡಾಗ ಭಾಷೆ ಉಳಿಯುತ್ತದೆ. ಯಾವುದೂ ಪರಿಪೂರ್ಣ ಎಂದು ಹೇಳಲಾಗದು. ನನ್ನ ಅನುವಾದವೂ ಅಷ್ಟೇ. ಭಾನು ಮುಸ್ತಾಕ್ ಅವರ ಪುಸ್ತಕವನ್ನು ಅನುವಾದ ಮಾಡುವ ಮೊದಲು ನಾನು ತಿಂಗಳುಗಟ್ಟಲೆ ಸಂಶೋಧನೆ ಮಾಡಿದ್ದೆ. ಸಮುದಾಯದ ಬಗೆಗಿನ ಸಿನೆಮಾ, ಸೀರಿಯಲ್, ಸಂಗೀತವನ್ನು ಕೇಳಿ ಅರ್ಥ ಮಾಡಿಕೊಂಡಿದ್ದೇನೆ. ಭಾನು ಮುಸ್ತಾಕ್ ಅವರ ಕೃತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳಲ್ಲೂ ಅಂತಹ ದೌರ್ಜನ್ಯವಿದೆ. ಎಲ್ಲಾ ಹೆಣ್ಣು ಮಕ್ಕಳು ಅಂತಹ ಮಾನಸಿಕತೆಯಿಂದ ತೊಳಲುತ್ತಾರೆ. ಸಾಂಸ್ಕೃತಿಕವಾಗಿ ಭಿನ್ನತೆ ಇದ್ದರೂ ಸಮಸ್ಯೆಗಳು ಬಹುತೇಕ ಸಾಮಾನ್ಯವಾಗಿರುತ್ತದೆ. ಹಾಗಾಗಿ ಆ ಕಥೆಗಳು ಸಾರ್ವತ್ರಿಕ ಎಂದು ಪ್ರಶ್ನೆಯೊಂದಕ್ಕೆ ದೀಪಾ ಭಾಸ್ತಿ ಪ್ರತಿಕ್ರಿಯಿಸಿದರು.
ಪಿಪಿ ಗೋಮತಿ ಮೆಮೋರಿಯಲ್ ಟ್ರಸ್ಟ್‌ನ ಬಂಬಿನ ಚಿನ್ನಮ್ಮ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ.ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು. ಪಿಪಿ ಗೋಮತಿ ಬಗ್ಗೆ ಮೀರಾ ಅರಾನ್ಹ ಪರಿಚಯ ನೀಡಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶ್ರೀನಾಥ್ ಎಂ.ಪಿ. ವಂದಿಸಿದರು. ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು.
ಅನುವಾದಕಿ ದೀಪಾ ಭಾಸ್ತಿ ಉಪನ್ಯಾಸ ನೀಡಿದರು. ಪ್ರೊ.ಪಿ.ಎಲ್.ಧರ್ಮ, ಡಾ.ಶ್ರೀನಾಥ್ ಎಂ.ಪಿ., ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net