ಮಂಗಳೂರು : ಪಿ.ಪಿ.ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸ ಜೂ.9ರಂದು 10.30ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬರಹಗಾರ್ತಿ ಮತ್ತು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ದೀಪಾ ಭಾಸ್ತಿ ಉಪನ್ಯಾಸ ನೀಡಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಪಿ.ಪಿ.ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿಶ್ವವಿದ್ಯಾನಿಲಯ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಚಿಂತನೆಯೇ ಭಿನ್ನಮತವಾದಾಗ: ಭಾಷೆ ಮತ್ತು ಜಗತ್ತಿನ ಕುರಿತು ಕೆಲವು ಆಲೋಚನೆಗಳು’ ಎಂಬ ವಿಷಯದ ಕುರಿತು ದೀಪಾ ಭಾಸ್ತಿ ಉಪನ್ಯಾಸ ನೀಡಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಓದು ಮತ್ತು ಬರವಣಿಗೆಯ ಆಸಕ್ತಿ ಹಾಗೂ ಜೀವ ಪರವಾದ ಬರಹದ ವಸ್ತುವನ್ನು ಕಂಡುಕೊಳ್ಳುವ ದೃಷ್ಟಿಕೋನವನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಅವರು ತಿಳಿಸಿದರು.
ಟ್ರಸ್ಟ್ ನ ಪ್ರಮುಖರಾದ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಪ್ರಮುಖರಾದ ಬಂಬೀನ ಚಿನ್ನಮ್ಮ, ಪ್ರೊ.ನಾಗಪ್ಪ ಗೌಡ, ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು.