

ಮೈಸೂರು: ನಾಡಪ್ರಭು ಕೆಂಪೇಗೌಡರ ಕುರಿತು ಆಳವಾದ ಅಧ್ಯಯನ ನಡೆಯಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಇತಿಹಾಸ ವಿದ್ವಾಂಸಕ ಡಾ.ತಲಕಾಡು ಚಿಕ್ಕರಂಗೇಗೌಡ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಶೋಧನೆಗೆ ಒತ್ತು ನೀಡಬೇಕು. ಅದನ್ನು ಬಿಟ್ಟು ಬೇರೆ ವಿಷಯಗಳಿಗೆ ಆದ್ಯತೆ ನೀಡಿದರೆ ಎಲ್ಲವೂ ವ್ಯರ್ಥವಾಗಲಿದೆ. ಆದ್ದರಿಂದ ಸಂಶೋಧನೆ ಎಂದರೆ ಅರಮನೆ, ಕೋಟೆಯಂತಹ ನಿರ್ಮಾಣ ಕಾಮಗಾರಿಗಳಲ್ಲ. ಈ ಕುರಿತು ತಲೆಕೆಡಿಸಿಕೊಳ್ಳಬೇಕಿಲ್ಲ. ಬರೀ ಸಂಶೋಧನೆಯತ್ತ ಮಾತ್ರ ಗಮನ ನೀಡಿ. ಅದಕ್ಕಾಗಿ ಅಗತ್ಯ ಸೌಲಭ್ಯವನ್ನೂ ಕಲ್ಪಿಸಿಕೊಟ್ಟರೆ ಸಾಕು ಎಂದು ಹೇಳಿದರು.
ಕೆಂಪೇಗೌಡ ಕುರಿತು ತಪ್ಪು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಅವರ ಚರಿತ್ರೆಯನ್ನು ವೈಭವೀಕರಿಸಿ ಕೆಲವರು ಕೃತಿಗಳನ್ನೂ ಬರೆದಿದ್ದಾರೆ. ಆದರೆ, ಅವರ‌್ಯಾರು ಅಧ್ಯಯನ ಮಾಡಿದವರಲ್ಲ. ಇದರಿಂದ ತಪ್ಪು ಸಂದೇಶಗಳು ರವಾನೆಯಾಗುತ್ತಿದೆ. ಇದನ್ನು ಸರಿಪಡಿಸಿ ಸತ್ಯವನ್ನು ಹೇಳಬೇಕಿದೆ. ಅದಕ್ಕಾಗಿ ಅವರ ಕುರಿತು ಶಿಸ್ತುಬದ್ಧವಾಗಿ ಸಂಶೋಧನೆಯಾಗಬೇಕಿದೆ ಎಂದು ಹೇಳಿದರು.
ಕೆಂಪೇಗೌಡರು ಮಾತ್ರವೇ ನಾಡಪ್ರಭುಗಳೇ? ಇವರನ್ನು ಬಿಟ್ಟು ಬೇರೆಯವರು ಇರಲಿಲ್ಲ? ಎಂಬ ಕೊಂಕು ಮಾತುಗಳೂ ಕೇಳಿಬರುತ್ತಿವೆ. ಇದು ಸರಿಯಲ್ಲ. ನಾಡಪ್ರಭುಗಳು ಬಹಳಷ್ಟು ರಾಜರು ಇರಬಹುದು. ಈ ಹೆಸರಿಗೆ ತಕ್ಕಂತೆ ಅವರ‌್ಯಾರು ನಡೆದುಕೊಳ್ಳಲಿಲ್ಲ. ಜತೆಗೆ, ನಾಡಪ್ರಭು ಎಂಬ ಬಿರುದಿಗೆ ವಿಜಯನಗರ ಸಾಮ್ರಾಜ್ಯದ ಮಾನ್ಯತೆಯೂ ಇತ್ತು ಎಂದು ಹೇಳಿದರು.
ತಮಿಳುನಾಡಿನ ಅಂಕುಶಗಿರಿಯಲ್ಲಿ 900 ಎಕರೆ ಭೂಮಿಯನ್ನು ಕೆಂಪೇಗೌಡರ ವಂಶಸ್ಥರಿಗೆ ಬ್ರಿಟನ್‌ನ ಮಹಾರಾಣಿ ಉಡುಗೊರೆಯಾಗಿ ನೀಡಿದ್ದು, ಏಕೆ ಕೊಟ್ಟರು ಎಂಬುದು ಗೊತ್ತಿಲ್ಲ. ಇದನ್ನು ಅರಿತುಕೊಳ್ಳಲು ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
654 ವರ್ಷ ಆಳ್ವಿಕೆ ನಡೆಸಿದ ತಲಕಾಡು ಗಂಗರು ಮತ್ತು ಚಾಲುಕ್ಯ ರಾಜವಂಶವನ್ನು ನಿರ್ಲಕ್ಷಿಸಲಾಗಿದೆ. ಅಧ್ಯಯನ ಮಾಡುವಲ್ಲಿಯೂ ಸರ್ಕಾರ, ವಿಶ್ವವಿದ್ಯಾಲಯಗಳೂ ವಿಫಲವಾಗಿವೆ. ಎರಡು ರಾಜಪರಂಪರೆಯ ಕೊಡುಗೆಗಳು, ಸಾಧನೆಯನ್ನು ಸ್ಮರಿಸಿಕೊಳ್ಳುವ ಕೆಲಸವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಅವರು ‘ಕರ್ನಾಟಕ’ ಎಂದು ಮೊದಲು ನಾಮಕರಣ ಮಾಡಲಿಲ್ಲ. ಅವರು ಮರುನಾಮಕರಣ ಮಾಡಿದ್ದಾರೆಯಷ್ಟೇ ಅದಕ್ಕೂ ಮುನ್ನ, 7ನೇ ಶತಮಾನದಲ್ಲೇ ತಲಕಾಡಿನ ಗಂಗರ ಭೂವಿಕ್ರಮ ರಾಜ ‘ಕರ್ನಾಟಕ’ ಎಂದು ಮೊದಲು ನಾಮಕರಣ ಮಾಡಿದರು. ಇದಕ್ಕೆ ಶಾಸನದ ದಾಖಲೆ ಇದೆ. ಆದಾಗ್ಯೂ ಗಂಗರಿಗೆ ಗೌರವ ಸಲ್ಲಿಸುತ್ತಿಲ್ಲ. ಇವರ ಬಳಿಕ ಬಂದ ಸಿಎಂಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಕಿಡಿಕಾರಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ ಮಾತನಾಡಿ, ಇತಿಹಾಸವನ್ನು ವಸ್ತುನಿಷ್ಠವಾಗಿ ವ್ಯಾಖ್ಯಾನ ಮಾಡಬೇಕು. ಆದರೆ, ರಾಜಕಾರಣಿಗಳಂತೆ ಇತಿಹಾಸಕಾರರು ಸಹ ಪೂರ್ವಾಗ್ರಹ ಪೀಡಿತರು. ಅವರಿಗೆ ಬೇಕಾದ ಚರಿತ್ರೆಯ ಸಾಕ್ಷಿಗಳನ್ನು ಶೋಧಿಸಲು ಹೋಗುತ್ತಾರೆ. ಎಡ-ಬಲ ಪಂಥಿಯರು ತಮಗೆ ಬೇಕಾದ ರೀತಿಯಲ್ಲೇ ವಿಶ್ಲೇಷಣೆ ಮಾಡುತ್ತಿದ್ದಾರೆ. ಆದ್ದರಿಂದ ಈ ಯಾವುದರ ಹಂಗು ಇಲ್ಲದೆಯೇ ಇತಿಹಾಸದಲ್ಲಿ ಹುದುಗಿರುವ ಸತ್ಯದರ್ಶನವನ್ನು ವಿಶ್ವವಿದ್ಯಾಲಯಗಳು ಮಾಡಿಸಬೇಕು ಎಂದು ಹೇಳಿದರು.
ಈಗಿನ ಬೆಂಗಳೂರು ನಗರವು ಕೆಂಪೇಗೌಡರು ಬಯಸಿದಂತಿಲ್ಲ. ಇದು ಕಾಸ್ಮೋಪಾಲಿಟಿನ್ ಸಿಟಿಯಾಗಿ ಪರಿವರ್ತನೆಗೊಂಡಿದೆ. ಸಂಸ್ಕೃತಿ, ಪರಂಪರೆ ಹಿಮ್ಮುಖವಾಗಿ ಹಣವೇ ಮುಖ್ಯವಾಗಿದೆ. ಕೆಂಪೇಗೌಡರು ರೂಪಿಸಿದ ಪಂಚ ಸೂತ್ರಗಳಾದ ‘ಕೋಟೆ, ಗುಡಿ, ಕೆರೆ, ಉದ್ಯಾನ, ಪೇಟೆಯೇ ನಗರದ ಮೂಲ ಅಗತ್ಯಗಳು. ಆದರೆ, ಇದನ್ನೆಲ್ಲ ಬಿಟ್ಟು ಬೇರೆಯೆಲ್ಲ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಪ್ರೊ.ಎಚ್.ವಿಶ್ವನಾಥ್, ಕೇಂದ್ರದ ಮುಖ್ಯಸ್ಥ ಡಾ.ಸಿ.ರಾಮೇಗೌಡ ಇದ್ದರು.