

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾನು ಕಾದಂಬರಿ ರಚನೆ ಸಮಯದಲ್ಲಿ ಓದುಗರನ್ನು ಎಂದಿಗೂ ಗಮನಕ್ಕೆ ತೆಗೆದುಕೊಂಡಿಲ್ಲ. ವಿಷಯ, ಪಾತ್ರ, ಕ್ಷೇತ್ರದ ಆಳ, ಅದರಲ್ಲಿನ ಸಮಸ್ಯೆ ಬಗ್ಗೆ ಮಾತ್ರ ಗಮನಿಸುತ್ತೇನೆ. ಇದೇ ಕಾರಣಕ್ಕೆ ಉತ್ತಮ ಕಾದಂಬರಿ ರಚಿಸಲು ಸಾಧ್ಯವಾಗಿದೆ. ಈ ಎಲ್ಲ ಸಾಧನೆಗೂ ತತ್ವಶಾಸ್ತ್ರ ಅಧ್ಯಯನವೇ ಕಾರಣ ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಕಲ್ಯಾಣನಗರದ ಡಾ. ರಾಜೇಶ್ವರಿ ಮಹೇಶ್ವರಯ್ಯ ನಿವಾಸದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಗುರುವಾರ ಏರ್ಪಡಿಸಿದ್ದ ಭೈರಪ್ಪನವರೊಂದಿಗೆ ಮಾತುಕತೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತತ್ವಶಾಸ್ತ್ರ ಅಧ್ಯಯನದಿಂದ ಆಳವಾದ ಜ್ಞಾನ ಸಿಗಲಿದೆ. ದ.ರಾ. ಬೇಂದ್ರೆ ಸರಳವಾಗಿ ಬರೆಯುತ್ತಿದ್ದರೂ ಅದರಲ್ಲಿ ಆಳವಾದ ವಿಷಯ ಅಡಗಿರುತ್ತಿತ್ತು. ಇದಕ್ಕೆ ಅವರ ಅಧ್ಯಯನವೇ ಕಾರಣ. ಆಳವಾದ ವಿಷಯಗಳೊಂದಿಗೆ ಕಾದಂಬರಿ ಬರೆಯಬೇಕು. ಅಧ್ಯಯನ ಜತೆಗೆ ಕಥೆ ಹೇಳುವುದು ಹುಟ್ಟಿನಿಂದಲೇ ಕರಗತವಾಗಿರಬೇಕು. ಇದರಿಂದ ಕಾದಂಬರಿಗಳು ಉತ್ತಮವಾಗಿ ಹೊರಬರಲಿವೆ. ನನಗೆ ಕಥೆ ಹೇಳುವ ಪ್ರವೃತ್ತಿ ತಾಯಿಯಿಂದ ಬಂದಿದೆ ಎಂದರು.
ಕಾರ್ಯ ಕ್ಷೇತ್ರ, ಶ್ರಮ, ಅಪಾಯ ಇದ್ದಾಗಲೇ ಅತ್ಯುತ್ತಮ ಕಾದಂಬರಿ ಸಿಗಲಿವೆ. ನಾನು ಪ್ರತಿ ಕಾದಂಬರಿಯನ್ನು ಹೊಸ ಹುರುಪಿನಿಂದ ಬರೆಯುತ್ತಿದ್ದೆ. ಕಾರ್ಯ ಕ್ಷೇತ್ರ, ವಿಷಯಗಳ ಸಮಗ್ರ ಮಾಹಿತಿ, ಪಾತ್ರಗಳ ಸರಿಯಾದ ತಿಳಿವಳಿಕೆ ಸೇರಿ ಎಲ್ಲ ವಿಷಯಗಳನ್ನು ಅರಿತ ಬಳಿಕವೇ ಬರೆಯಲು ಆರಂಭಿಸುತ್ತಿದ್ದೆ. ಹೀಗಾಗಿ ಓದಗರು ನನ್ನ ಕಾದಂಬರಿಗಳಿಗೆ ಮನ್ನಣೆ ನೀಡಿದ್ದಾರೆ ಎಂದು ಆಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಭೈರಪ್ಪ ಅವರ ಕೃತಿಗಳು ನನ್ನ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿವೆ. ಕರ್ನಾಟಕ ಸೇರಿ ದೇಶ, ವಿದೇಶಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅವರು ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ಪ್ರೀತಿ, ಅಂತಃಕರಣ ಹೊಂದಿದ ವ್ಯಕ್ತಿ. ನನ್ನ 2 ಕೃತಿಗಳನ್ನು ಅವರ ಮನೆಯಲ್ಲಿ ಬಿಡುಗಡೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.
ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಂಗಲಾ ಭಟ್, ಮೇಘಾ ಹುಕ್ಕೇರಿ, ಡಾ. ಉಷಾ ಗದ್ದಗಿಮಠ, ಸುನೀತಾ ಮೂರಶಿಳ್ಳಿ, ಸರಸ್ವತಿ ಭೋಸ್ಲೆ, ಸುಜಾತಾ ಹಡಗಲಿ, ಲಲಿತಾ ಪಾಟೀಲ, ಶಾಲಿನಿ ರುದ್ರಮುನಿ, ಪುಷ್ಪಾ ಹಾಲಭಾವಿ, ಜಿ.ಎಂ. ಹೆಗಡೆ, ಶಶಿಧರ ನರೇಂದ್ರ, ಎಂ.ಎ. ಸುಬ್ರಹ್ಮಣ್ಯ, ಇತರರು ಇದ್ದರು.
ನಾನು ಕುಡಿದಿಲ್ಲ: ಇಂದು ಅನೇಕರು ಸರಾಯಿ ಕುಡಿಯುತ್ತಾರೆ. ಆದರೆ ನನಗೆ ಆ ಹವ್ಯಾಸವಿಲ್ಲ. ಒಂದು ದಿನವೂ ಕುಡಿದಿಲ್ಲ. ಈ ಹವ್ಯಾಸದಿಂದ ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲ. ರಾತ್ರಿ ಕುಡಿದರೆ ಬೆಳಗ್ಗೆ ಬೇಗ ಏಳುವುದು ಅಸಾಧ್ಯ. ಇನ್ನು ಮತ್ತೆ ಸಂಜೆ ಕುಡಿತ ತನ್ನತ್ತ ಎಳೆಯುತ್ತದೆ. ಇದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಇದರಿಂದ ದೂರವಿದ್ದೇನೆ. ಲೇಖಕರು ಜೀವನದಲ್ಲಿ ತ್ಯಾಗ ಮಾಡಬೇಕು. ಅಂದಾಗಲೇ ಉತ್ತಮ ಕೃತಿಗಳು ಹೊರಬರಲು ಸಾಧ್ಯ ಎಂದು ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.
ಸಾಹಿತ್ಯಕ್ಕೇ ನನ್ನ ಜೀವನ ಮೀಸಲು: ನಾನು ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟು ಮಟ್ಟಕ್ಕೆ ಸಾಧನೆ ಮಾಡಲು ಓದುಗರು, ನಾನು ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಗಳ ಸಹಕಾರವೂ ಮುಖ್ಯ. ಕಾದಂಬರಿ ಬರೆಯಲು ದೇಶ, ವಿದೇಶ, ಹಳ್ಳಿಗಳನ್ನು ಸುತ್ತವುದು ಹೆಚ್ಚಾಗಿತ್ತು. ನನಗೆ ಸಾಕಷ್ಟು ರಾಯಲ್ಟಿ ಬರುತ್ತದೆ. ಅದನ್ನೆಲ್ಲ ಸಾಹಿತ್ಯಕ್ಕೇ ಖರ್ಚು ಮಾಡುತ್ತಿದ್ದೇನೆ. ಒಂದು ರೀತಿ ನನ್ನ ಜೀವನವನ್ನು ಸಾಹಿತ್ಯಕ್ಕೇ ಮೀಸಲಿಟ್ಟಿದ್ದೇನೆ ಎಂದ ಎಸ್.ಎಲ್. ಭೈರಪ್ಪ, ಪ್ರವಾಸ ಕಥನವನ್ನು ಯಾರು ಬೇಕಾದರೂ ಬರೆಯಬಹುದು. ಹೀಗಾಗಿ ನಾನು ಅದಕ್ಕೆ ಅಷ್ಟು ಆಸಕ್ತಿ ವಹಿಸಿಲ್ಲ ಎಂದರು.