

ಹುಬ್ಬಳ್ಳಿ: ಈ ವರ್ಷದ ಬರಗಾಲ ದೀಪಾವಳಿ ಹಬ್ಬದ ಅದ್ದೂರಿತನವನ್ನು ಕಿತ್ತುಕೊಂಡಿದೆ. ಆದರೆ, ಪ್ರತಿವರ್ಷದಂತೆ ಭಕ್ತಿ ಭಾವದಿಂದ ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ದೇವಿಯರ ಆರಾಧನೆಗೆ ಧಾರವಾಡ ಜಿಲ್ಲೆಯ ಜನರು ಸಜ್ಜಾಗಿದ್ದಾರೆ.
ರೈತರಿಗೆ ಭರ್ಜರಿ ಆದಾಯ ತಂದು ಕೊಡುವ ಮುಂಗಾರು ಹಂಗಾಮು ಈ ಬಾರಿ ಕೈಕೊಟ್ಟಿತು. ಮಳೆ ಕೊರತೆಯಿಂದ ಬಿತ್ತಿದ ಬೆಳೆಗಳು ಬರಲೇ ಇಲ್ಲ. ಈಗಷ್ಟೇ ಹಿಂಗಾರು ಬಿತ್ತನೆ ಮುಗಿದಿದ್ದು, ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ರೈತ ಸಮುದಾಯ ಮಾತ್ರ ಹೆಚ್ಚಿನ ಸಂಭ್ರಮ ಇಲ್ಲದಿದ್ದರೂ ಸಂಪ್ರದಾಯದಂತೆ ಹಟ್ಟಿ ಹಬ್ಬ (ದನದ ಕೊಟ್ಟಿಗೆ ಪೂಜೆ) ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ರೈತ ತಾನು ಬೆಳೆದ ಹೂವು, ಹಣ್ಣು, ತರಕಾರಿ ಇತ್ಯಾದಿಗಳನ್ನು ಹಟ್ಟೆವ್ವನಿಗೆ ಸರ್ಮಪಿಸಿ ಪೂಜಿಸುವ ಹಬ್ಬವೇ ದೀಪಾವಳಿಯಾಗಿದೆ. ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಸಡಗರ ಕಂಡು ಬರುತ್ತಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲು ಜನತೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸೋಮವಾರ ಅಮಾವಾಸ್ಯೆ ಹಾಗೂ ಮಂಗಳವಾರ ಬಲಿಪಾಡ್ಯಮಿ ಆಚರಿಸಲಾಗುವುದು. ಹುಬ್ಬಳ್ಳಿ ಧಾರವಾಡ ಸೇರಿ ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿದೆ.
ಭಾನುವಾರ ಎಣ್ಣೆ ಸ್ನಾನ ಮಾಡುವ ಮೂಲಕ ಜನ ಹಬ್ಬಕ್ಕೆ ಚಾಲನೆ ನೀಡಿದರು. ಸೋಮವಾರ ಅಮಾವಾಸ್ಯೆ ಅಂಗವಾಗಿ ವಾಹನ, ಅಂಗಡಿ, ಕಚೇರಿಗಳ ಪೂಜೆ ಹಾಗೂ ಮಂಗಳವಾರ ಬಲಿಪಾಡ್ಯ ಪೂಜೆ ನೆರವೇರಿಸಲಿದ್ದಾರೆ.
ಹಬ್ಬದ ನಿಮಿತ್ತ ಭಾನುವಾರ ಮಾರುಕಟ್ಟೆಯಲ್ಲಿ ಹೊಸ ಬಟ್ಟೆ, ಹಣ್ಣು ಹಂಪಲು, ಹೂವಿನ ಮಾಲೆ, ತಳಿರು ತೋರಣಗಳು ಸೇರಿ ಪೂಜೆಗಾಗಿ ವಿವಿಧ ಸಾಮಗ್ರಿ ಖರೀದಿ ಜೋರಾಗಿತ್ತು. ಮನೆ ಮುಂದೆ ಹಬ್ಬದ ಮೆರಗು ಹೆಚ್ಚಿಸುವ ಬಗೆಬಗೆಯ ಆಕಾಶ (ಶಿವನಬುಟ್ಟಿ) ಬುಟ್ಟಿಗಳ ಖರೀದಿ ಜೋರಾಗಿದ್ದು, ಸಾಂಪ್ರದಾಯಿಕ ಮಣ್ಣಿನ ಹಣತೆಗೂ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿದೆ.
ಕೃಷಿ ಮಿತ್ರ ಜಾನುವಾರುಗಳಿಗೆ ಅಲಂಕಾರದ ಸಾಮಗ್ರಿಗಳನ್ನು ಖರೀದಿ ಮಾಡಲಾಗುತ್ತಿದೆ. ಮೂಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ, ಕೊಂಬಿಗೆ ಹಚ್ಚಲು ಬಗೆಬಗೆಯ ಬಣ್ಣ ಸೇರಿ ವಿವಿಧ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದ ಜನರು ಹಬ್ಬದ ಅಗತ್ಯ ಸಾಮಗ್ರಿ, ಹೂವು, ಹಣ್ಣು ಖರೀದಿಗೆ ಆಗಮಿಸಿದ್ದರಿಂದ ಅವಳಿನಗರದ ಮಾರುಕಟ್ಟೆಗಳು ಜನಜಂಗುಳಿಯಿಂದ ಕೂಡಿದ್ದವು. ಇನ್ನೊಂದೆಡೆ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳ ಬೆಲೆ ಏರಿಕೆಯಾಗಿದ್ದು ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ.
ಸೇಬುಹಣ್ಣು 1 ಕೆಜಿಗೆ 200- 250 ರೂ., ದಾಳಿಂಬೆ ಕೆಜಿಗೆ 150 ರಿಂದ 200 ರೂ. ಮೋಸಂಬಿ ಕೆಜಿಗೆ 80 ರೂ. ಕಿತ್ತಲೆ ಕೆಜಿಗೆ 60 ರೂ. ಬಾಳೆಹಣ್ಣು ಒಂದು ಡಜನ್ಗೆ 35ರಿಂದ 40 ರೂ., ಸೀತಾಲ ಕೆಜಿಗೆ 150 ರೂ. ದರವಿದೆ.
ಅಲ್ಲದೆ ಹೂವಿನ ಬೆಲೆಯಲ್ಲೂ ಸ್ವಲ್ಪ ಏರಿಕೆಯಾಗಿದ್ದು, ಸೇವಂತಿ, ಚೆಂಡು ಹೂ, ದುಂಡು ಸೇವಂತಿಗೆ, ಗುಲಾಬಿ, ಕಾಕಡಾ ಮಲ್ಲಿಗೆ, ಕನಕಾಂಬರ ಎಲ್ಲ ಹೂಗಳು ಎಂದಿಗಿಂತ ಇಂದು 40- 50 ರೂ. ಹೆಚ್ಚಾಗಿತ್ತು.
ಒಂದು ಜತೆ ಬಾಳೆಕಂಬಕ್ಕೆ 50ರೂ.ವರೆಗೆ ಮಾರಾಟ ಮಾಡಲಾಯಿತು. ಅಂಗಡಿ, ವಾಹನಗಳ ಪೂಜೆಗೆ ಹೂವಿನ ಅವಶ್ಯಕತೆ ಇರುವುದರಿಂದ ಸಹಜವಾಗಿ ಹೂವಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ದುಪ್ಪಟ್ಟಾಗಿದೆ. ಗ್ರಾಹಕರು ವಿಧಿ ಇಲ್ಲದೇ ಚೌಕಾಸಿ ಮಾಡಿ ಅಗತ್ಯಕ್ಕೆ ತಕ್ಕಂತೆ ಹೂಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.
ಬಗೆಬಗೆ ಶಿವನಬುಟ್ಟಿ: ದೀಪಾವಳಿ ಹಬ್ಬದ ಸಂಕೇತವಾಗಿರುವ ಆಕಾಶ (ಶಿವನಬುಟ್ಟಿ) ಬುಟ್ಟಿಗಳು ಮಾರುಕಟ್ಟೆಯ ಅಂದ ಹೆಚ್ಚಿಸಿವೆ.
ಸೂರ್ಯ, ಚಂದ್ರ, ನಕ್ಷತ್ರ, ಪಿರಾಮಿಡ್, ಭೂಗೋಳ ಸೇರಿ ವಿವಿಧ ಪಗಳ ವಿನ್ಯಾಸ ಹೊಂದಿರುವ ಆಕರ್ಷಕ ಆಕಾಶಬುಟ್ಟಿಗಳು ರಾತ್ರಿ ಸಮಯದಲ್ಲಿ ಮನೆ, ಅಂಗಡಿ, ಕಟ್ಟಡಗಳಲ್ಲಿ ಮಿಂಚತೊಡಗಿವೆ. ಪ್ಲಾಸ್ಟಿಕ್ ಹಾಳೆಯಲ್ಲಿ ರಚಿಸಿದ ಗೋಲಾಕಾರ, ಯು ಆಕಾರ, ಚೌಕಾಕಾರ, ನಕ್ಷತ್ರಾಕಾರ, ಪಿರಾಮಿಡ್ ಆಕಾರ, ಬಹುಮಹಡಿಯ ಪಿರಾಮಿಡ್ ಆಕಾರ ಸೇರಿ ವಿವಿಧ ವಿನ್ಯಾಸದ ಆಕಾಶಬುಟ್ಟಿಗಳು ಹೊಳಪಿನೊಂದಿಗೆ ತಮ್ಮದೆಯಾದ ಕಲಾ ವೈಶಿಷ್ಟ್ಯತೆ ಯೊಂದಿಗೆ ಮನೆ, ಮಳಿಗೆಗಳ ಮುಂದೆ ಬೆಳಗುತ್ತಿವೆ.
ಖರೀದಿ ಸಂಭ್ರಮ: ದೀಪಾವಳಿಯ ದಿನ ಏನಾದರೂ ಮನೆಗೆ ಕೊಂಡೊಯ್ದರೆ ಲಕ್ಷ್ಮಿ ಮನೆ ತುಂಬುತ್ತಾಳೆ ಎಂಬ ನಂಬಿಕೆ ಹಾಗೂ ಸಂಪ್ರದಾಯದ ಹಿನ್ನೆಲೆಯಲ್ಲಿ ಭಾನುವಾರವೂ ಎಲ್ಲೆಡೆ ಖರೀದಿ ಸಂಭ್ರಮ ಕಂಡು ಬಂತು. ಬಹಳಷ್ಟು ಜನರು ಬೈಕ್, ಕಾರು, ಚಿನ್ನದ ಆಭರಣ, ಟಿವಿ, ಫ್ರಿಜ್, ವಾಷಿಂಗ್ ಮಶಿನ್, ಮೊಬೈಲ್ ಫೋನ್ ಹೀಗೆ ತರಹೇವಾರಿ ವಸ್ತುಗಳನ್ನು ಖರೀದಿಸಿದರು. ಬಹಳ ದಿನಗಳಿಂದ ಖರೀದಿ ಮಾಡಬೇಕೆಂದುಕೊಂಡಿದ್ದ ಗೃಹೋಪಯೋಗಿ ವಸ್ತುಗಳನ್ನು ದೀಪಾವಳಿ ದಿನ ಮನೆಗೆ ಒಯ್ದು ಸಂಭ್ರಮ ಪಟ್ಟರು.