

ಬೆಳಗಾವಿ : ರಾಜ್ಯಾದ್ಯಂತ ಅರಣ್ಯವೆಂದು ಪರಿಭಾವಿಸಿದ್ದ ಡೀಮ್ಡ್ ಪಾರೆಸ್ಟ್ ಜಮೀನು ಸಂರಕ್ಷಣೆಗಾಗಿ ವಿವಿಧ ಇಲಾಖೆಗಳೊಂದಿಗೆ ಜಂಟಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಬೆಳಗಾವಿಯ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಕಾರಿಗಳ ಜತೆ ಅರಣ್ಯ ಪರಿಸರ ಜೀವ ವೈವಿಧ್ಯ ಅಭಿವೃದ್ಧಿ ವಿಷಯ ಕುರಿತು ಶುಕ್ರವಾರ ಜರುಗಿದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಡೀಮ್ಡ್ ಪಾರೆಸ್ಟ್ ಸಂರಕ್ಷಿಸಬೇಕಿದೆ. ಹೀಗಾಗಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ಅದಿಕಾರಿಗಳಿಗೆ ಸೂಚನೆ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 10 ಸಾವಿರ ಹೆಕ್ಟೇರ್ ಡೀಮ್ಡ್ ಪಾರೆಸ್ಟ್ ಇದೆ. ಅದರಲ್ಲಿ 2 ಸಾವಿರ ಹೆಕ್ಟೇರ್ ಒತ್ತುವರಿಯಾಗಿದೆ. ಅದರಲ್ಲೇ ಕೆಲ ಪ್ರದೇಶವನ್ನು ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರು ಮಾಡಲಾಗಿದೆ. ಕಲ್ಲು ಗಣಿಗಾರಿಕೆ ಸೇರಿ ಇನ್ನಿತರ ಚಟುವಟಿಕೆಗಳಿಗೂ ಅವಕಾಶ ಕೊಡಲಾಗಿದೆ. ಹೀಗಾಗಿ ಬಾಕಿ ಉಳಿದಿರುವ 8 ಸಾವಿರ ಹೆಕ್ಟೇರ್ ಪ್ರದೇಶ ಸಂರಕ್ಷಣೆ ಮಾಡಬೇಕಿದೆ. ಈ ಕುರಿತು ಸಂಬಂತ ಇಲಾಖೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪರಿಸರ ಹಾನಿಗಿಲ್ಲ ಅವಕಾಶ: ಬೆಳಗಾವಿ ನಗರದ ಸುತ್ತಮುತ್ತ 2 ಸಾವಿರ ಎಕರೆ ಅರಣ್ಯ ಪ್ರದೇಶವಿದೆ. ಅದನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದ್ದು, ಯಾವುದೇ ಮರ ಕಟಾವು ಮಾಡದಂತೆ ಮತ್ತು ಆ ಪ್ರದೇಶದಲ್ಲಿ ಪರಿಸರ ವಿರೋ ಚಟುವಟಿಕೆ ನಡೆಸದಂತೆ ತಿಳಿಸಲಾಗಿದೆ. ರಾಮದುರ್ಗ ತಾಲೂಕಿನ ಶಬರಿಕೊಳ್ಳ, ಗೋಕಾಕ ತಾಲೂಕಿನ ಯೋಗಿಕೊಳ್ಳದಂತೆ ಈ ಪ್ರದೇಶಗಳನ್ನೂ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವ್ಯಾಪ್ತಿಗೆ ಪಡೆದುಕೊಳ್ಳಲಾಗುವುದು. ಔಷಧ ಗಿಡಗಳ ಸಂರಕ್ಷಣೆ ಹಾಗೂ ಪಕ್ಷಿಗಳಿಗೆ ಆಹಾರ ನೀಡುವ ಗಿಡಗಳನ್ನು ಬೆಳಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.
ಮೇ 20 ಜೀವ ವೈವಿಧ್ಯ ದಿನ: ಈಗಾಗಲೇ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಗ್ರಾಪಂ, ತಾಪಂ, ಜಿಪಂ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಜೀವ ವೈವಿಧ್ಯ ಸಮಿತಿ ರಚಿಸಲಾಗಿದೆ. ಆದರೆ, ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಸಮಿತಿಗಳಿಗೆ ಜೀವ ತುಂಬುವ ಕೆಲಸ ಮಾಡಲಾಗುವುದು. ಮೇ 20ರಂದು ಜೀವ ವೈವಿಧ್ಯ ದಿನ ಆಚರಣೆ ಮಾಡಲಾಗುತ್ತಿದೆ ಎಂದು ಅಶೀಸರ ಮಾಹಿತಿ ನೀಡಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಪರಿಸರ ಉಳಿಸಿ, ಬೆಳೆಸುವ ಮತ್ತು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಅದಿಕಾರಿಗಳಿಗೆ ಸೂಚಿಸಲಾಗಿದೆ. ವ್ಯಾಕ್ಸಿನ್ ಡಿಪೋದಲ್ಲಿ ಪರಿಸರಕ್ಕೆ ಹಾನಿಯಾಗುವಂತಹ ಯೋಜನೆಗೆ ಅವಕಾಶ ನೀಡುವುದಿಲ್ಲ. ಖುದ್ದು ಪರಿಶೀಲನೆ ನಡೆಸಲಾಗುವುದು.| ಅನಂತ ಹೆಗಡೆ ಅಶೀಸರ ಅಧ್ಯಕ್ಷ, ಕರ್ನಾಟಕ ಜೀವ ವೈವಿಧ್ಯ ಮಂಡಳಿ