

ಮೈಸೂರು: ಸರ್ಕಾರಗಳು ಆದಿವಾಸಿಗಳ ಹಕ್ಕು, ಶಿಕ್ಷಣ, ಸಂಸ್ಕೃತಿ, ಜೀವನ ಉಳಿಸಲು ಮಹತ್ವ ನೀಡಬೇಕು ಎಂದು ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಒತ್ತಾಯಿಸಿದರು.
ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವಿಕಾಸ ವಾಹಿನಿ ಮತ್ತು ಸೌಹಾರ್ದಬೀಡು ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ, ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹರಿಹರ ಆನಂದಸ್ವಾಮಿ ಅವರಿಗೆ ಅಭಿನಂದನೆ ಹಾಗೂ ಶ್ರೀಕಾಂತ್-75 ಆದಿವಾಸಿ ಹಕ್ಕೊತ್ತಾಯ ಚಳವಳಿಯ ಹೆಜ್ಜೆಗಳು ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಗಳು ಆದಿವಾಸಿ ಜನರಿಗೆ ತೊಂದರೆ ನೀಡದೆ ಅನುಕೂಲ ಕಲ್ಪಿಸಬೇಕು. ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಬೇಕು. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಆದಿವಾಸಿಗಳನ್ನು ವನ್ಯಜೀವಿ ಕಾಯ್ದೆಯಡಿ ಹೊರಹಾಕಿ ನಿಯಮಾನುಸಾರ ಪುನರ್ವಸತಿ ನೀಡದೆ ಆದಿವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿ 50 ವರ್ಷಗಳು ಕಳೆದಿವೆ. ಈ ಸಂಬಂಧ ಡೀಡ್ ಹಾಗೂ ಬುಡಕಟ್ಟು ಕೃಷಿಕರ ಸಂಘ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಆದಿವಾಸಿಗಳ ಪರ ತೀರ್ಪು ಬಂದು ದಶಕವೇ ಕಳೆದಿವೆ. ಮುಜಾಫರ್ ಅಸ್ಸಾದಿ ಸಮಿತಿ ನೀಡಿದ ವರದಿ ಸಲ್ಲಿಕೆಯಾಗಿ 9 ವರ್ಷಗಳು ಕಳೆದಿವೆ. ಆದರೆ ಸರ್ಕಾರ ಹೈಕೋರ್ಟ್ ತೀರ್ಪು ಹಾಗೂ ಅಸ್ಸಾದಿ ಸಮಿತಿ ಶಿಫಾರಸನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ನಿರ್ದೇಶನದ ಪ್ರಕಾರ ಕೈಬಿಟ್ಟು ಹೋಗಿರುವ ಉಳಿದ ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ತಲಾ 5 ಎಕರೆ ಭೂಮಿ, 15 ರಿಂದ 20 ಲಕ್ಷ ರೂ. ಪರಿಹಾರ ಪ್ಯಾಕೇಜ್ ನೀಡಬೇಕು, ಅರಣ್ಯ ಹಕ್ಕು ಕಾಯ್ದೆಯಡಿ ವೈಯಕ್ತಿಕ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಭೂಮಿ ಹಕ್ಕು ನೀಡಿ ನಮ್ಮ ಪರಂಪರೆ ಉಳಿಸಬೇಕು. ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಆದಿವಾಸಿಗಳ ಶೈಕ್ಷಣಿಕ ಅಕಾಡೆಮಿ, ಸಾಂಸ್ಕೃತಿ ಅಕಾಡಮಿ, ಭಾಷಾ ಅಕಾಡೆಮಿ, ಬಿರ್ಸಾಮುಂಡ ನಿಗಮ, ರಾಜ್ಯ ಮಟ್ಟದಲ್ಲಿ ಆದಿವಾಸಿ ಅಭಿವೃದ್ಧಿ ಮಂಡಳಿ ರಚಿಸಿ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಅಭಿನಂದನೆ ಸ್ವೀಕರಿಸಿದ ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರ ಹರಿಹರ ಆನಂದಸ್ವಾಮಿ ಮಾತನಾಡಿ, ಶಿಥಿಲಗೊಂಡು ದಿಕ್ಕು ತಪ್ಪಿರುವ ದಲಿತ ಚಳವಳಿ ಪುನರ್ ಸಂಘಟನೆಯಾಗಬೇಕಿದೆ ಎಂದರು.
70ರ ದಶಕದಲ್ಲಿ ಮಹತ್ತರವಾದ ಸಾಮಾಜಿಕ ಅನ್ಯಾಯ ವಿರುದ್ಧದ ಜತೆಗೆ ಸಮಾಜದಲ್ಲಿ ಸಮ ಬಾಳು-ಸಮ ಪಾಲು ಆಶಯವನ್ನು ಹುಟ್ಟುಹಾಕಿದ ಶಕ್ತಿ ದಲಿತ ಚಳವಳಿ. ನಾನು ಆ ಚಳವಳಿಯ ಅಂಗ. ನಾನು ಜಗತ್ತನ್ನು ನೋಡಲು ಆರಂಭಿಸಿದ್ದೇ ದಲಿತ ಚಳವಳಿಯಿಂದ. ಬೂಸಾ ಹೋರಾಟದಿಂದ ನಮ್ಮ ಹೋರಾಟ ಆರಂಭವಾಯಿತು ಎಂದು ನೆನಪಿಸಿಕೊಂಡರು.
ಸಮ ಸಮಾಜ ಮತ್ತು ಅಂಬೇಡ್ಕರ್ ತತ್ವ ಸಿದ್ಧಾಂತ ವಿಷಯದ ಕುರಿತು ಕವಿ ಸೋಸಲೆ ಗಂಗಾಧರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿಯೆನ್ನುವ ಪ್ರೆಡಂಭೂತ ಬೆಂಬಿಡದೆ ಕಾಡಲಿದ್ದು, ಹೀಗಾಗಿ ನೀವು ಭೌದ್ಧರಾಗುವಂತೆ ಕರೆ ನೀಡಿದ್ದರು. ಆದರೆ ನಾವು ಬಾಯಲ್ಲಿ ಜೈ ಹೇಳುತ್ತ ಯಥಾ ಸಂಸ್ಕೃತಿಯಲ್ಲಿ ಸಮುದಾಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಶ್ರೀಕಾಂತ್-75 ಆದಿವಾಸಿ ಹಕ್ಕೋತ್ತಾಯ ಚಳವಳಿಯ ಹೆಜ್ಜೆಗಳು ಕೈಪಿಡಿಯನ್ನು ಸಮಾಜ ಸೇವಕ ಡಾ.ಕೆ.ರಘುರಾಮ್ ಬಿಡುಗಡೆ ಮಾಡಿದರು. ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಮಾನವ ಹಕ್ಕುಗಳ ಹೋರಾಟಗಾರ ಪ್ರಸನ್ನ, ಪತ್ರಕರ್ತ ಸೋಮಯ್ಯ ಮಲೆಯೂರು, ಲೇಖಕ ಪೂರೀಗಾಲಿ ಮರಡೇಶಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆದಿವಾಸಿಗಳು ಕೃಷಿ ಮಾಡುತ್ತಿರುವ ಹಾಗೂ ಸಾಗುವಳಿ ಪತ್ರ ಹೊಂದಿರುವ ಕುಟುಂಬಗಳಿಗೆ ಜಮೀನಿನ ಪಕ್ಕಾಪೋಡು ಮಾಡಿ ಅಂತಿಮ ದಾಖಲೆ ನೀಡಬೇಕು. ಸರ್ಕಾರಿ/ ಬಗರ್‌ಹುಕುಂ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಆದಿವಾಸಿಗಳು ಕೃಷಿ ಮಾಡುತ್ತಿರುವ ಭೂಮಿಗೆ ಬೇರೆಯವರು ಸಾಗುವಳಿ ಪತ್ರ ಮಾಡಿಸಿಕೊಂಡಿರುವುದನ್ನು ರದ್ದು ಪಡಿಸಿ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದರು. -ಡಾ.ಎಸ್.ಶ್ರೀಕಾಂತ್, ನಿರ್ದೇಶಕ ಡೀಡ್ ಸಂಸ್ಥೆ