

ಸಾಲಿಗ್ರಾಮ: ದೇಶ ಮತ್ತು ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುದು ರೈತನ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ರೈತರ ಜೀವನಾಡಿ ಆಗಿರುವ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದ್ದು ಹಿಂದು ಸಂಪ್ರದಾಯದಂತೆ ತುಂಬಿದ ನದಿಗೆ ಬಾಗಿನ ಅರ್ಪಿಸಲು ಒಳ್ಳೆಯ ಕಾರ್ಯಕ್ರಮಗಳನ್ನು ಮಿರ್ಲೆ ಗ್ರಾಮಸ್ಥರು ಮಾಡಿದರು ಎಂದು ಹುಣಸಮ್ಮ ದೇವಿಯ ಮುಖ್ಯ ಅರ್ಚಕ ಕುಮಾರಸ್ವಾಮಿ ನೇತ್ರಾವತಿ ತಿಳಿಸಿದರು.
ಗ್ರಾಮದ ಹೊರವಲಯ ಕಾವೇರಿ ನದಿ ತೀರದಲ್ಲಿರುವ ಸಂಧ್ಯಮ ಮಂಟಪ ಹತ್ತಿರ ನವಗ್ರಾಮ ಹುಣಸಮ್ಮ ದೇವಿಯ ಭಕ್ತರು ಮತ್ತು ಮಿರ್ಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಮಂಗಳವಾರ ಬೆಳಗ್ಗೆ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಾಗಿನ ಅರ್ಪಿಸಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಇದ್ದರು.
ಗಂಗೆಯ ಮೂರ್ತಿ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡುವ ಮೂಲಕ ಅರ್ಚಕ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಿಳೆಯರಿಂದ ಕಾವೇರಿ ನದಿಗೆ ಪೂಜೆ ಮಾಡಿಸಿ ಬಾಗಿನ ಅರ್ಪಿಸಿದರು. ಪ್ರತಿವರ್ಷ ಕಾವೇರಿ ಇದೇ ರೀತಿ ಮೈದುಂಬಿ ಹರಿದು ಲಕ್ಷಾಂತರ ರೈತರಿಗೆ ಅನುಕೂಲವಾಗುವ ನೀರನ್ನು ಒದಗಿಸಿಕೊಡುವ ಮೂಲಕ ಉತ್ತಮ ಬೆಳೆ ಬೆಳೆಯಲು ರೈತರಿಗೆ ಸಹಕಾರಿಯಾಗಲಿ ಎಂದು ಅರ್ಚಕರು ಪ್ರಾರ್ಥಿಸಿದರು.
ಕಾವೇರಿ ನದಿ ಮೈದುಂಬಿ ಹರಿದರೆ ಬಳ್ಳೂರು ಕಟ್ಟೆಯ ಮುಖಾಂತರ ಮಿರ್ಲೆ ಗ್ರಾಮದ ಸುತ್ತಮುತ್ತ ಚಾಮರಾಜ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ನೀರು ಹರಿಯುವುದರಿಂದ ಪ್ರತಿಯೊಬ್ಬ ರೈತರು ಕಬ್ಬು, ಭತ್ತ, ತರಕಾರಿ, ಅಡಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಹಾಗಾಗಿ ಕಾವೇರಿ ನದಿಯನ್ನು ನಿರ್ಲೆ ಗ್ರಾಮಸ್ಥರು ವಿಶೇಷವಾಗಿ ಪೂಜಿಸುತ್ತಾರೆ. ಅದೇ ರೀತಿ ತಾಲೂಕಿನಲ್ಲಿ ಉತ್ತಮ ನೀರಾವರಿ ಪ್ರದೇಶ ಎಂದರೆ ಅದು ಮಿರ್ಲೆ ಗ್ರಾಮ. ಇಲ್ಲಿ ಉತ್ತಮ ಬೆಳೆ ಇಳುವರಿ ತೆಗೆಯುವಂತಹ ರೈತರಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ ಇಲ್ಲಿನ ರೈತರು ಇತರರಿಗೂ ಮಾದರಿಯಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೊಸಟ್ಟಿ ವಿಶ್ವನಾಥ್ ತಿಳಿಸಿದರು.
ಮಿರ್ಲೆ ಗ್ರಾಮ ಪಂಚಾಯಿತಿ ಸದಸ್ಯೆ ಮಂಗಳಾ ರವೀಶ್, ಗೀತಾ, ಎಸ್.ಆರ್.ಲೀಲಾವತಿ, ಸರ್ವಮಂಗಳಾ, ಭಾಗ್ಯಾ, ಗೀತಾ, ವೇದಾವತಿ, ಅನಸೂಯಾ, ಶಾಂತಮ್ಮ, ಸಿಇಟಿ ವಿದ್ಯಾಸಂಸ್ಥೆ ವ್ಯವಸ್ಥಾಪಕ ಧರಣಿಕುಮಾರ್, ಸಣ್ಣ ರಾಮು, ಮಹಿಳಾ ಸಂಘದ ಅಧ್ಯಕ್ಷೆ ಜಯಂತಿ, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಭೇರ್ಯ ಸಿ.ಸಿ.ಮಹದೇವ್, ವಿಂಧ್ಯಾ, ಸಂದೇಶ, ನಾಗೇಶ್, ರಾಜು, ರಂಗಸ್ವಾಮಿ, ಎಂ ಜೆ ರವಿ, ನಾಗಿಣಿ ಇತರರಿದ್ದರು.