

ವಿಜಯಪುರ: ಲಿಂ. ಸಿದ್ಧೇಶ್ವರ ಶ್ರೀಗಳ ಸ್ಮರಣಾರ್ಥ ಉದ್ಯಾನವನ್ನು ಅಭಿವೃದ್ಧಿಗೊಳಿಸಿದ್ದು, ಸಾರ್ವಜನಿಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಲಿಂ. ಸಿದ್ಧೇಶ್ವರ ಶ್ರೀಗಳ ಸ್ಮರಣಾರ್ಥ ಅಭಿವೃದ್ಧಿಗೊಳಿಸಿದ ಉದ್ಯಾನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ, ಸುಮಾರು 2.5 ಎಕರೆ ಪ್ರದೇಶದಲ್ಲಿ ಈ ಉದ್ಯಾನವನ ನಿರ್ಮಿಸಲಾಗಿದೆ.
ಉದ್ಯಾನವನದಲ್ಲಿ ಹುಲ್ಲು ಹಾಸು, ಅಲಂಕಾರಿಕ ಬದು, ನೆಲಹಾಸು, ಗಿಡಗಳು, ಮಕ್ಕಳ ಆಟಿಕೆ ಸಾಮಗ್ರಿ, ಆಸನಗಳು, ನಾಮಫಲಕ ಅಳವಡಿಸಲಾಗಿದೆ. ಸಾರ್ವಜನಿಕರು ಮತ್ತು ಜಿಲ್ಲಾಸ್ಪತ್ರೆಗೆ ಬರುವವರಿಗೆ ತುಂಬ ಸಹಕಾರಿಯಾಗಲಿದೆ ಎಂದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮೇಯರ್ ಮಹೇಜಬಿನ್ ಹೊರ್ತಿ, ಉಪ ಮೇಯರ್ ದಿನೇಶ ಹಳ್ಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಪಾಲಿಕೆ ಆಯುಕ್ತ ಬದ್ರುದ್ದಿನ ಸೌದಾಗರ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಆರ್‌ಸಿಎಚ್ ಡಾ. ಕೆ.ಡಿ. ಗುಂಡಬಾವಡಿ ಮತ್ತಿತರರಿದ್ದರು.