ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಾಗಿನ ಸಮರ್ಪಣೆ.

mysore
Published on

ಮೈಸೂರು: ಜಿಲ್ಲೆಯ ಜೀವನಾಡಿ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಾಗಿನ ಸಮರ್ಪಣೆ ಮಾಡಿದರು.


ಸಿಂಗಾರಗೊಂಡಿದ್ದ ಜಲಾಶಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನಡೆದವು. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಹಾಗೂ ಎಚ್.ಡಿ.ಕೋಟೆ ತಾಲೂಕಿನ ಕಿತ್ತೂರ ಗ್ರಾಮದ ರವಿರಾಮೇಶ್ವರ ದೇವಸ್ಥಾನದ ಅರ್ಚಕ ಭಾಸ್ಕರ್ ನೇತೃತ್ವದಲ್ಲಿ 18 ಬಾಗಿನಗಳಿಗೆ ಪೂಜೆ ಸಲ್ಲಿಸಲಾಯಿತು.


ಕೆಆರ್‌ಎಸ್ ಜಲಾಶಯದಲ್ಲಿ ಕಾವೇದಿ ನದಿಗೆ ಬಾಗಿನ ಅರ್ಪಣೆ ಮಾಡಿ ಮೈಸೂರು ರಸ್ತೆ ಮಾರ್ಗವಾಗಿ ಸಂಪುಟದ ಕೆಲ ಸಚಿವರೊಂದಿಗೆ ತಡವಾಗಿ ಸಿಎಂ ಆಗಮಿಸಿದರು. ಹೀಗಾಗಿ, ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಂಜೆ 4.35ಕ್ಕೆ ಆರಂಭಗೊಂಡಿತು. ಬಂದ ತಕ್ಷಣ ಸಿಎಂ, ಬಾಗಿನವನ್ನು ಕಣ್ಣಿಗೆ ಹೊತ್ತಿಕೊಂಡು ನಮಸ್ಕರಿಸಿ ಕಬಿನಿ ಜಲಾಶಯಕ್ಕೆ ಸಮರ್ಪಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹ ಬಾಗಿನ ಅರ್ಪಿಸಿ ಕಪಿಲಾ ನದಿಗೆ ಕೈಮುಗಿದರು.


ಮುರಿದ ಸಂಪ್ರದಾಯ: ಈ ಹಿಂದೆ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಕೆಆರ್‌ಎಸ್ ಜಲಾಶಯದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿತ್ತು. ಈ ಸಲ ಇದು ಮುರಿದಿದೆ. ಮೊದಲು ಕೆಆರ್‌ಎಸ್, ನಂತರ ಕಬಿನಿ ಜಲಾಶಯದಲ್ಲಿ ಈ ಕಾರ್ಯ ನಡೆಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಡಿ.ರವಿಶಂಕರ್, ದರ್ಶನ್ ಧ್ರುವನಾರಾಯಣ್, ಗಣೇಶ ಪ್ರಸಾದ್, ಮಾಜಿ ಸಚಿವ ಎಂ.ಶಿವಣ್ಣ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನೀರಾವರಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಕೆ. ಮಹೇಶ್, ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್ ಇತರರಿದ್ದರು.

ವಿವಾದದ ಹಿನ್ನೆಲೆ; ಸುನೀಲ್ ಬೋಸ್ ಗೈರು:

ಚಾಮರಾಜನಗರ ಸಂಸದ ಸುನೀಲ್ ಬೋಸ್ ಗೈರಾಗಿದ್ದರು. ಆಷಾಢ ಶುಕ್ರವಾರ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯ ಹಣೆಗೆ ಕುಂಕುಮ ಇಡುವ ಮೂಲಕ ಬೋಸ್ ವಿವಾದಕ್ಕೆ ಸಿಲುಕಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಮಾತುಗಳು ಕೇಳಿಬಂದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net