ಬುದ್ದಿಬಲ, ಪರಿಶ್ರಮದಿಂದ ಗೆಲವು ಸಾಧ್ಯ

mkg1a
Published on

ಹರಿಹರ: ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದ್ದು, ಅದನ್ನು ಬುದ್ದಿಬಲ ಮತ್ತು ಪರಿಶ್ರಮದಿಂದ ಮಾತ್ರ ಗೆಲ್ಲಲು ಸಾಧ್ಯ ಎಂದು ಹಿರಿಯೂರಿನ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಶ್ರೀ ದುಗಾರ್ಂಬಿಕಾ ದೇವಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಟಾಪನೆ ಹಾಗೂ ಕಳಶಾರೋಹಣ ಕಾರ್ಯಕ್ರಮದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿದ್ಯೆ ಮತ್ತು ಜ್ಞಾನದ ಬಲದಿಂದ ಮಾತ್ರ ಬದುಕು ಕಟ್ಟಿಕೊಳ್ಳಬಹುದು. ಆದರೆ, ಭಾವನೆಗಳು ನಮ್ಮ ಬದುಕಿನಲ್ಲಿ ಕೆಲ ಸಂದರ್ಭಕ್ಕೆ ಮಾತ್ರ ಇರಬೇಕು. ಹಾಗಾಗಿ, ಜೀವನದಲ್ಲಿ ಗೆಲ್ಲುವ ಕಡೆ ನಾವು ಹೆಚ್ಚಿನ ಆಸಕ್ತಿ ತೋರಬೇಕೆಂದರು.

ಪರಿಶಿಷ್ಟ ಸಮುದಾಯ ದೇವಾಲಯದ ನಿರ್ಮಾಣಕ್ಕೆ ಆಸಕ್ತಿ ತೋರಿಸಿದಂತೆ, ತಾವು ವಾಸಿಸುವ ಸ್ಥಳದಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾಗಬೇಕು. ಗುರು ಹಿರಿಯರಲ್ಲಿ ಗೌರವವಿಟ್ಟು, ಪರಸ್ಪರ ಪ್ರೀತಿ ವಿಶ್ವಾಸ, ಶಾಂತಿ, ಸೌಹಾರ್ದ, ಸಾಮರಸ್ಯದಿಂದ ಬದುಕು ನಡೆಸಿದರೆ ನಾವು ನಂಬಿದಂತಹ ದೇವರನ್ನು ಅಲ್ಲೇ ಕಾಣಬಹುದು ಎಂದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಧಾರ್ಮಿಕ ಸಂಸ್ಕಾರ ಮತ್ತು ಆಚರಣೆಗಳಿಂದ ಇಂದು ಮಠ ಮಂದಿರಗಳು ನೆಲೆ ನಿಲ್ಲಲು ಸಾಧ್ಯವಾಗಿದೆ. ಎಲ್ಲರ ಹೃದಯದಲ್ಲಿ ಭಗವಂತ ನೆಲೆಸಿರುವ, ಅದನ್ನು ಸಾಕ್ಷಾತ್ಕಾರಿಸಿಕೊಳ್ಳಲು ಶ್ರದ್ಧೆ, ಪ್ರಾಮಾಣಿಕತೆ, ಧಾರ್ಮಿಕ ಮಾರ್ಗದಲ್ಲಿ ಸಾಗಬೇಕೆಂದು ತಿಳಿಸಿದರು.

ಸಮಾರಂಭದಲ್ಲಿ ದೇವಸ್ಥಾನ ಸಮಿತಿ ಕೆ.ಬಿ. ಷಣ್ಮುಖಪ್ಪ, ಕೆ.ಜಿ. ಹನುಮಂತಪ್ಪ, ಹಾಲಪ್ಪ, ಗಂಗಾಧರ್, ಅಂಜಿನಪ್ಪ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net