

ಹುಬ್ಬಳ್ಳಿ : ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ಕರ್ನಾಟಕ ಅಷ್ಟೇ ಅಲ್ಲದೆ, ಇಡೀ ದೇಶದ ಸಂಪತ್ತು. ಕರ್ನಾಟಕದ ವಿಜ್ಞಾನ, ತಂತ್ರಜ್ಞಾನ ಜಗತ್ಪ್ರಿಸಿದ್ಧಿಗೊಳ್ಳಲು ಅವರ ಪಾತ್ರ ಮಹತ್ವದ್ದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಬಣ್ಣಿಸಿದರು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಇಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಭಾರತದ ಹರಿಕಾರ ಸರ್ ಎಂ. ವಿಶ್ವೇಶ್ವರಯ್ಯ ಅವರು ಸರ್.ಎಂ. ವಿಶ್ವೇಶ್ವರಯ್ಯ ಅವರು ನಾಡಿನ ಅಭಿವೃದ್ಧಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡವರು. ಅವರ ದೂರದೃಷ್ಟಿ ಮತ್ತು ಚಾಣಾಕ್ಷತನದಿಂದ ಇಂದು ನೂರಾರು ಜಿಲ್ಲೆಗಳು ನೀರಾವರಿ ಯೋಜನೆಗೆ ಒಳಪಟ್ಟಿವೆ ಎಂದರು.
ನಾಡು ಕಂಡ ಶ್ರೇಷ್ಠ ವ್ಯಕ್ತಿ ವಿಶ್ವೇಶ್ವರಯ್ಯ ಅವರು ಇಂಜಿನೀಯರಿಂಗ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದವರು. ಅವರು ಕನ್ನಂಬಾಡಿ ಆಣೆಕಟ್ಟನ್ನು ಕಟ್ಟದಿದ್ದರೆ ಇಂದು ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ನಿಮಾಣವಾಗುತ್ತಿತ್ತು ಎಂದು ಹೇಳಿದರು.
ಮೈಸೂರು ಅರಸ ದಿ.ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಆಸ್ಥಾನದಲ್ಲಿ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಇಡೀ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಆಟೋಮೆಟೆಡ್ ಕ್ರಸ್ಟ್ಗೇಟ್ ಪರಿಚಯಿಸಿದ್ದರು ಎಂದರು.
ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಭಾರತದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಅನೇಕ ಬದಲಾವಣೆಗಳು ಆಗಿವೆ ಎಂದು ಹೇಳಿದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ ಹಾಗೂ ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಅತಿಥಿಗಳಾಗಿದ್ದರು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವಿಣ ಅಗಡಿ, ವೀರೇಶ ಮೊಟಗಿ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಜಂಟಿ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಇಂಜಿನಿಯರ್ ಡೇ ಕಮೀಟಿ ಚೇರ್ಮನ್ ಅಭಿಷೇಕ ಮಾಂಡೆ, ರಮೇಶ ಪಾಟೀಲ ಹಾಗೂ ಇತರರು ಇದ್ದರು.