ಪಟಾಕಿ ಪೂರೈಕೆ ಇಳಿಕೆ, ಬೇಡಿಕೆ ಏರಿಕೆ!

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಪಟಾಕಿ ದುರಂತ ಪ್ರಕರಣಗಳು ಮೈಸೂರಿನ ಪಟಾಕಿ ವಹಿವಾಟಿನ ಮೇಲೂ ಪರಿಣಾಮ ಬೀರಿದ್ದು, ಪಟಾಕಿ ಪೂರೈಕೆ ಕಡಿಮೆಯಾಗಿದೆ. ಆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.


ಹಾವೇರಿಯ ಆಲದಟ್ಟಿ ಗ್ರಾಮದ ಬಳಿ ಪಟಾಕಿ ಅಗ್ನಿ ಅವಘಡ ಸಂಭವಿಸಿ ನಾಲ್ವರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದಲ್ಲಿ 14 ಜನ ಸಾವಿಗೀಡಾದರು. ಈ ಎರಡು ಅವಘಡಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ ಗಣೇಶ ಚತುರ್ಥಿ, ಸಭೆ-ಸಮಾರಂಭ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿ ಬಳಕೆ ನಿಷೇಧಿಸಿ ಆದೇಶ ಹೊರಡಿಸಿತು.

ಜತೆಗೆ, ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಹಾರಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿವಿಧ ಷರತ್ತು ವಿಧಿಸುವ ಮೂಲಕ ಪಟಾಕಿ ವಹಿವಾಟಿಗೆ ಅನುಮತಿ ಕೊಟ್ಟಿವೆ.


ಅತ್ತಿಬೆಲೆ ದುರಂತದ ಬಳಿಕ ಬಹಳಷ್ಟು ಜನರು ಪಟಾಕಿ ವಹಿವಾಟಿಗೆ ಹಿಂದೇಟು ಹಾಕಿದ್ದಾರೆ. ಕೆಲ ವ್ಯಾಪಾರಸ್ಥರು ಕಡಿಮೆ ಪಟಾಕಿ ತರಿಸಿಕೊಂಡಿದ್ದಾರೆ. ಇದರಿಂದ ಮೈಸೂರು ಮಾರುಕಟ್ಟೆಯಲ್ಲಿ ಪಟಾಕಿ ದಾಸ್ತಾನು ಕಡಿಮೆಯಾಗಿದೆ. ಆದರೆ, ದೀಪಾವಳಿ ಹಬ್ಬ ಆಚರಿಸುವ ಸಾರ್ವಜನಿಕರಿಂದ ಪಟಾಕಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೀಗಾಗಿ, ಪಟಾಕಿ ದರ ಮತ್ತಷ್ಟು ದುಬಾರಿ ಆಗುವುದು ನಿಶ್ಚಿತ.


ಈ ನಡುವೆ, ಅಡೆತಡೆಗಳ ನಡುವೆಯೂ ಪಟಾಕಿ ವಹಿವಾಟು ಬಿರುಸುಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು ಇದ್ದಾರೆ. ಇಡೀ ಮೈಸೂರು ಮಾರುಕಟ್ಟೆಯಲ್ಲಿ ಅಂದಾಜು 8-10 ಕೋಟಿ ರೂ. ಮೊತ್ತದಷ್ಟು ಪಟಾಕಿ ಮಾರಾಟವಾಗುವ ಲೆಕ್ಕಾಚಾರ ಇದೆ.

16 ಕಡೆ ಮಳಿಗೆಗಳ ನಿರ್ಮಾಣ


ಜೆ.ಕೆ. ಮೈದಾನ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಇಟ್ಟಿಗೆಗೂಡು, ಸರಸ್ವತಿಪುರಂ, ಪಡುವಾರಹಳ್ಳಿ, ಚಾಮುಂಡಿಪುರಂ ವೃತ್ತ, ರಾಮಕೃಷ್ಣನಗರ, ಕುಂಬಾರಕೊಪ್ಪಲು ಸೇರಿದಂತೆ ನಗರದಲ್ಲಿ 16 ಕಡೆ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. 115 ವ್ಯಾಪಾರಸ್ಥರು ಅನುಮತಿ ಪಡೆದಿದ್ದು, ಪಟಾಕಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಸಂಜೆ ವೇಳೆಗೆ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ತಗಡಿನ ಅಂಗಡಿಗಳು ತಲೆ ಎತ್ತಿದ್ದು, ವ್ಯಾಪಾರಿಗಳು ಪಟಾಕಿಗಳ ಜೋಡಣೆ ಕಾರ್ಯದಲ್ಲಿ ನಿರತರಾಗಿದ್ದರು. ‘ಶುಕ್ರವಾರ ಬೆಳಗ್ಗೆ ಪಟಾಕಿ ಮಾರಾಟ ಶುರುವಾಗಲಿದೆ’ ಎಂದು ಮೈಸೂರು ಹಸಿರು ಪಟಾಕಿ ಮಾರಾಟಗಾರರ ಸಂಘದ ಖಜಾಂಚಿ ಸುರೇಶ್‌ಗೌಡ ತಿಳಿಸಿದರು.


ಈ ಬಾರಿ ಪಟಾಕಿ ಮಾರಾಟಕ್ಕೆ ಐದು ದಿನ (ನ. 10ರಿಂದ 14ರವರೆಗೆ) ಮಾತ್ರ ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿಯೇ ಪಟಾಕಿ ಮಾರಾಟ ಬಿರುಸಾಗಿರುತ್ತಿತ್ತು. ಆದರೆ ಪ್ರಸಕ್ತ ವರ್ಷ ಹಬ್ಬ ಶುರುವಾಗಲು 3 ದಿನ ಮಾತ್ರ ಬಾಕಿ ಇದ್ದಾಗ್ಯೂ ಪಟಾಕಿ ವಹಿವಾಟು ಚುರುಕುಗೊಂಡಿಲ್ಲ.


ಏತನ್ಮಧ್ಯೆ, ದೀಪಾವಳಿಯ ಮುನ್ನ ವಾರಾಂತ್ಯವಾದ ಶನಿವಾರ (2ನೇ ಶನಿವಾರ) ಮತ್ತು ಭಾನುವಾರ ರಜೆ ಬಂದಿದೆ. ಇದರೊಂದಿಗೆ ಹಬ್ಬದ ರಜೆಯೂ ಸೇರಿಕೊಂಡಿದೆ. ಇದು ಪ್ರವಾಸಕ್ಕೆ ಹೋಗಲು ಅನುವು ಮಾಡಿಕೊಟ್ಟಿದೆ. ಪಟಾಕಿಗಾಗಿ ಎರಡ್ಮೂರು ಸಾವಿರ ರೂ. ಖರ್ಚು ಮಾಡುವ ಬದಲು, ಅದೇ ದುಡ್ಡಿನಲ್ಲಿ ಕುಟುಂಬ ಸಹಿತ ಪ್ರವಾಸಕ್ಕೆ ತೆರಳಲು ಕೆಲವರು ಮುಂದಾಗಿದ್ದಾರೆ. ಇದರಿಂದ ಶೇ. 10ರಷ್ಟು ಪಟಾಕಿ ವಹಿವಾಟು ಕಡಿಮೆ ಆಗಬಹುದು. ಹಬ್ಬ ಶುಕ್ರವಾರ, ಶನಿವಾರ ಬಂದಿದ್ದರೆ ಪಟಾಕಿ ವ್ಯಾಪಾರ ಇನ್ನಷ್ಟು ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಯಾರೂ ಪ್ರವಾಸಕ್ಕೆ ಹೋಗಲು ಇಷ್ಟಪಡುತ್ತಿರಲಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಕ್ಯೂಆರ್ ಕೋಡ್


ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದ್ದು, ಇತರ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಇದನ್ನು ಪತ್ತೆಹಚ್ಚಲು ಕ್ಯೂಆರ್ ಕೋಡ್ ಬಂದಿದೆ. ಮೊಬೈಲ್‌ನಿಂದ ಪಟಾಕಿ ಬಾಕ್ಸ್ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪರೀಕ್ಷಿಸಬಹುದು. ಉತ್ಪನ್ನ ಶೇ.100ರಷ್ಟು ಹಸಿರು ಪಟಾಕಿ ಎಂಬುದು ಖಾತ್ರಿಯಾಗುತ್ತದೆ. ಜತೆಗೆ, ಕಂಪನಿ, ಉತ್ಪಾದನಾ ಸ್ಥಳ, ದಿನಾಂಕ ಮತ್ತು ಇತರ ವಿವರ ದೊರೆಯಲಿದೆ. ಇದರಿಂದ ಗ್ರಾಹಕರಿಗೂ ವಿಶ್ವಾಸ ಮೂಡಲಿದೆ.


ಕ್ಯೂಆರ್ ಕೋಡ್‌ನೊಂದಿಗೆ ಪಟಾಕಿ ಮತ್ತು ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರುತ್ತದೆ. ಇದು ಇಲ್ಲದಿದ್ದರೆ ಹಸಿರು ಪಟಾಕಿ ಅಲ್ಲ ಎಂಬುದು ದೃಢವಾಗುತ್ತದೆ. ಇಂತಹ ಪಟಾಕಿಯನ್ನು ಜಪ್ತಿ ಮಾಡಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.ಪಟಾಕಿ ಮಾರಾಟ, ಬಳಕೆ ನಿಯಂತ್ರಿಸುವ ಕುರಿತು ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದೆ. ಶಬ್ದ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮುಂದಾಗಿರುವ ಜಿಲ್ಲಾಡಳಿತ ಸಾರ್ವಜನಿಕರ ಆಸ್ತಿ ಮತ್ತು ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಈ ಸಲ ಕೆಲ ಕಠಿಣ ಕ್ರಮವನ್ನೂ ತೆಗೆದುಕೊಂಡಿದೆ.

ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ


ಹಬ್ಬದ ದಿನಗಳಲ್ಲಿ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ರಾತ್ರಿ 8ರಿಂದ 10ಗಂಟೆ ವರೆಗೆ ಪಟಾಕಿ ಸಿಡಿಸಬಹುದು. ಉಳಿದ ಸಮಯದಲ್ಲಿ ಪಟಾಕಿಗಳ ಸ್ಫೋಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.


ಕಡಿಮೆ ಶಬ್ದದ ಪಟಾಕಿ ಬಳಕೆ ಮಾಡಬೇಕು. ಪಟಾಕಿ ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಡಿಸೆಬಲ್‌ಗಿಂತ (ಎಐ) ಅಥವಾ 145 ಡಿಸೆಬಲ್(ಸಿ)ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ ಇನ್ನಿತರ ನಿಶಬ್ದ ವಲಯಗಳ ಸುತ್ತಮುತ್ತ ಯಾವುದೇ ರೀತಿಯ ಶಬ್ದ ಉಂಟುಮಾಡುವ ಪಟಾಕಿ ಬಳಕೆಯನ್ನು ನಿಷೇಧಿಸಲಾಗಿದೆ.

ಪಟಾಕಿ ಮಾರಾಟ ಮತ್ತು ಬಳಕೆ ಕುರಿತು ನಿಯಮ ಉಲ್ಲಂಘಿಸುವವರ ವಿರುದ್ಧ ಕಾಯ್ದೆ ಅನುಸಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ದೀಪಾವಳಿ ಹಬ್ಬವನ್ನು ಸಿಡಿಮದ್ದು, ಪಟಾಕಿಗಳನ್ನು ಉಪಯೋಗಿಸದೆ, ಬೆಳಕಿನ ಹಬ್ಬವನ್ನಾಗಿ ಆಚರಿಸಬೇಕು.
ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net