

ಬಳ್ಳಾರಿ : ನಗರದ ಪೊಲೀಸ್ ಕವಾಯತು ಮೈದಾನದಲ್ಲಿರುವ ಸಭಾಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬುಧವಾರ ರಕ್ತದಾನ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ನಟರಾಜ್ ಭೇಟಿ ಮಾಡಿ, ಕರೊನಾ ಮಹಾಮಾರಿ ನಂತರ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದಾಗಿ ಪೊಲೀಸ್ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಕ್ತದಾನ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ಇದೇ ವೇಳೆ ಶಿಬಿರಾರ್ಥಿಗಳಿಗೆ ರಕ್ತದಾನ ಮಾಡುವಂತೆ ಸಲಹೆ ನೀಡಿದರು.
ಆರೋಗ್ಯ ಇಲಾಖೆ ರಕ್ತ ಸುರಕ್ಷತೆ ವಿಭಾಗದ ಜಿಲ್ಲಾ ಮೇಲ್ವಿಚಾರಕ ಗಿರೀಶ್ ಭಾಗವಹಿಸಿ ಮಾತನಾಡಿ, ರಕ್ತದಾನ ಮಹಾದಾನ. ರಕ್ತಕ್ಕೆ ಪರ್ಯಾಯ ವಸ್ತುವನ್ನು ಕಂಡು ಹಿಡಿಯಲು ಆಗಿಲ್ಲ. ಹಾಗಾಗಿ ಒಂದು ಜೀವ ಉಳಿಸಬೇಕಾದರೆ ರಕ್ತ ಪ್ರಾಮುಖ್ಯತೆ ಪಡೆದುಕೊಂಡಿದೆ. ಗರ್ಭಿಣಿಯರು, ಮಕ್ಕಳು, ವೃದ್ಧರು, ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಅವರಿಗೆ ರಕ್ತ ನೀಡಿದರೆ ಅವರ ಜೀವ ಉಳಿಸಿದಂತಾಗುತ್ತದೆ. ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಡಿವೈಎಸ್‌ಪಿ ಜಿ.ಎನ್.ತಿಪ್ಪೇಸ್ವಾಮಿ ಮಾತನಾಡಿ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಬಂದೂಕು ತರಬೇತಿ ಶಿಬಿರಾರ್ಥಿಗಳಿಂದ ರಕ್ತದಾನ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿಸಲಾಯಿತು ಎಂದು ಮಾಹಿತಿ ನೀಡಿದರು.
ನಾಗರಿಕ ಬಂದೂಕು ತರಬೇತಿ ಶಿಬಿರದ ಎಂಟನೇ ದಿನದ ಹಿನ್ನೆಲೆ ಶಿಬಿರಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿ ರಕ್ತದಾನ ಮಾಡಿದರು. ಪೊಲೀಸ್ ಅಧಿಕಾರಿಗಳಾದ ಸಿದ್ದರಾಮೇಶ್ವರ ಗಡೇದ, ಅಮೋಘ್ ಆರ್.ಪಿ, ಗೋವಿಂದಪ್ಪ ಇನ್ನಿತರರಿದ್ದರು. ಬಂದೂಕು ತರಬೇತಿಯಲ್ಲಿ ಪಾಲ್ಗೊಂಡಿದ್ದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.