ರೆಡ್​ಜೋನ್​ಗಳ ಸಂಖ್ಯೆ 27ಕ್ಕೆ ಇಳಿಕೆ ; ಕರ್ಫ್ಯೂ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕರೊನಾ ಕೊಂಚ ಇಳಿಕೆ

2 cnhalli 2 web
Published on

ತುಮಕೂರು : ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರೊನಾ ಕೊಂಚ ತಗ್ಗಿದ್ದು, ಐವತ್ತು ಇದ್ದ ರೆಡ್​ಜೋನ್​ಗಳ ಸಂಖ್ಯೆ 27ಕ್ಕಿಳಿದಿದ್ದು, ಹಾಟ್​ಸ್ಪಾಟ್​ಗಳು ಕೂಡ 240 ರಿಂದ 123ಕ್ಕಿಳಿದಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಶೇ.48 ಇದ್ದ ಕರೊನಾ ಪಾಸಿಟಿವ್ ಪ್ರಮಾಣ ಶೇ.17ಕ್ಕಿಳಿದಿದೆ. ಪ್ರತಿದಿನ 2500 ರಿಂದ 3000 ದವರೆಗೆ ದೃಢವಾಗುತ್ತಿದ್ದ ಸೋಂಕಿನ ಪ್ರಕರಣಗಳ ಸಂಖೆಯೂ 750 ರಿಂದ 850ಕ್ಕೆ ಇಳಿದಿದೆ. ಪಾಸಿಟಿವ್ ಪ್ರಮಾಣ ಮತಷ್ಟು ಇಳಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿಯೂ ಸೋಂಕಿನ ಪ್ರಮಾಣ ತಗ್ಗಿದ್ದು, ಮೇ.25ರಂದು ಒಂದೂ ಪ್ರಕರಣವಿಲ್ಲದ 810 ಹಳ್ಳಿಗಳಿದ್ದವು. ಆದರೆ, ಜೂ.2ಕ್ಕೆ 1242 ಹಳ್ಳಿಗಳಲ್ಲಿ ಸೋಂಕಿನ ಪ್ರಕರಣಗಳೇ ಇಲ್ಲ, ಒಂದೇ ಒಂದು ಸೋಂಕಿನ ಪ್ರಕರಣವಿರುವ 503 ಗ್ರಾಮಗಳಿವೆ. ಗ್ರಾಮೀಣ ಜನರು ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಕರೊನಾ ವಿರುದ್ಧ ಗೆಲುವು ಸಾಧಿಸಬಹುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ, ಸೋಂಕು ದೃಢಪಟ್ಟವರಿಗೆ ತಕ್ಷಣವೇ ಕೋವಿಡ್ ಔಷಧ ಕಿಟ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ನೀಡುವ ಔಷಧಗಳನ್ನು ಹೊರತುಪಡಿಸಿ ಈಗಾಗಲೇ 35 ಸಾವಿರ ಮೆಡಿಸನ್ ಕಿಟ್ ಸಿದ್ಧಪಡಿಸಿ 31 ಸಾವಿರ ಕಿಟ್ ವಿತರಣೆ ಮಾಡಲಾಗಿದೆ.

ಜೂನ್ ಎರಡನೇ ವಾರ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳು, ತಾಪಂ ಇಒಗಳು ಸೇರಿ ಇತರ ಎಲ್ಲ ಅಧಿಕಾರಿಗಳ ಸೇವೆ ಉಪಯೋಗಿಸಿಕೊಂಡು ಸಂಪೂರ್ಣವಾಗಿ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ಪ್ರಯತ್ನ ಮುಂದುವರಿದಿದೆ.

ಲಸಿಕೆ ವಿತರಣೆ ಸಂಬಂಧ ಸಭೆ ನಡೆಸಿ, ಎಲ್ಲ ಪಿಎಚ್​ಸಿ ವೈದ್ಯಾಧಿಕಾರಿ, ತಾಲೂಕು ವೈದ್ಯಾಧಿಕಾರಿ, ತಹಸೀಲ್ದಾರ್, ತಾಲೂಕು ಪಂಚಾಯತಿ ಇಒ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸರ್ಕಾರದಿಂದ ಪೂರೈಕೆಯಾಗುತ್ತಿರುವ ಲಸಿಕೆಯನ್ನು 45ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ.

18 ರಿಂದ 44 ವರ್ಷದೊಳಗಿನ ಆದ್ಯತೆ ಗುಂಪುಗಳಿಗೆ ಲಸಿಕೆ ಬಂದ ದಿನವೇ ಸಮರ್ಪಕ ಮಾಹಿತಿ ಒದಗಿಸಿ ವಿತರಣೆ ಮಾಡಬೇಕೆಂದು ಸೂಚಿಸಿದ್ದು, ಅದರಂತೆ ಲಸಿಕೆ ಹಾಕಲಾಗುತ್ತಿದೆ. ಸರ್ಕಾರದಿಂದ ಬರುವ ಲಸಿಕೆಯನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡಲು ಸೂಕ್ತ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಶೇ.51 ಲಸಿಕೆ ನೀಡಲಾಗಿದೆ. 44 ವರ್ಷದೊಳಗಿನ 24 ಸಾವಿರ ಜನರಿಗೂ ಲಸಿಕೆ ಲಭಿಸಿದೆ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 751243 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 384908 ಜನರಿಗೆ ಲಸಿಕೆ ನೀಡಲಾಗಿದೆ. ಇದಲ್ಲದೆ ಮುಂಚೂಣಿ ಕಾರ್ಯಕರ್ತರು ಸೇರಿ ಇತರ ಸಿಬ್ಬಂದಿಗೆ 450808 ಮೊದಲನೇ ಡೋಸ್ ಮತ್ತು 115215 ಎರಡನೇ ಡೋಸ್ ಸೇರಿ ಒಟ್ಟು 566023 ಡೋಸ್ ಲಸಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net