

ಗೋಣಿಕೊಪ್ಪಲು: ಕಿಗ್ಗಟ್ಟ್ ನಾಡ್ ಫ್ಲೈಯಿಂಗ್ ಎಲ್ಬೋಸ್ ತಂಡ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹಾಕಿ ಟೂರ್ನಿ ನಡೆಯಿತು.
ಕಳೆದ 3 ವರ್ಷಗಳಿಂದ ಹಾಕಿ ಟೂರ್ನಿಯನ್ನು ನಡೆಸಿಕೊಂಡು ಬರುತ್ತಿರುವ ತಂಡವು ಈ ಬಾರಿ 4 ಅತಿಥಿ ಆಟಗಾರರನ್ನು ಸೇರಿಸಿಕೊಂಡು ಪಂದ್ಯಾವಳಿ ಆಯೋಜಿಸಲಾಗಿತ್ತು. ಕಳೆದ ಬಾರಿ ಹಾಕಿ ಟೂರ್ನಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ನಡೆದ ಹಾಕಿ ಟೂರ್ನಿಯನ್ನು ದೇಶದ ಯೋಧರಿಗೆ ಅರ್ಪಣೆ ಮಾಡಲಾಯಿತು. ಅಲ್ಲದೆ ಕಾರ್ಯಕ್ರಮಕ್ಕೆ ನಿವೃತ್ತ ಯೋಧರನ್ನು ಆಹ್ವಾನಿಸಿ ಗೌರವಿಸಲಾಯಿತು. ಯೋಧರ ನಾಡು ಕೊಡಗಿನಲ್ಲಿ ಈ ಬಾರಿ ನಡೆದ ಟೂರ್ನಿಯನ್ನು ಯೋಧರಿಗೆ ಅರ್ಪಣೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದರು. ದಾನಿಗಳಾದ ಕೈಬಿಲೀರ ಪಾರ್ವತಿ ಬೋಪಯ್ಯ ಅವರನ್ನು ಸನ್ಮಾನಿಸಲಾಯಿತು.
ಕರ್ನಲ್ ದೇಯಂಡ ಎಸ್.ಪೂವಯ್ಯ ಮಾತನಾಡಿ, ಹಾಕಿ ಕ್ರೀಡೆಯಲ್ಲಿ ಇತ್ತೀಚೆಗೆ ಹೆಚ್ಚು ಗೋಲುಗಳ ದಾಖಲೆ ನೋಡಿದಾಗ ಹಾಕಿ ಕ್ರೀಡೆಗೆ ಹಿನ್ನಡೆಯಾಗುವ ಮುನ್ಸೂಚನೆ ಇದೆ. ಕ್ಲಬ್ ಮಟ್ಟದಲ್ಲಿ ಹಾಕಿ ಕ್ರೀಡೆ ಕಡಿಮೆಯಾಗುತ್ತಿರುವುದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕರ್ನಲ್ ಕೋಟ್ರಮಾಡ ನರೇಂದ್ರ ಮಾತನಾಡಿ, ಹಾಕಿ ಕ್ರೀಡೆಗೆ ಕೊಡಗು ಜಿಲ್ಲೆಯಲ್ಲಿ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಅವಶ್ಯಕತೆಯಿದ್ದು ಮುಂದೆ ಹಾಕಿಗೆ ಮೂಲ ಸೌಕರ್ಯ ನೀಡುವ ಮೂಲಕ ಮತ್ತಷ್ಟು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆ ಮುಖ್ಯಸ್ಥ ಅಮೃತ್ ನಾಣಯ್ಯ ಮಾತನಾಡಿ, ವಿವಿಧ ಕ್ರೀಡೆಗಳ ಮೈದಾನಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ. ಸ್ಥಳೀಯವಾಗಿ ಟರ್ಫ್ ಮೈದಾನಗಳು ತರಬೇತಿ ಹಂತಕ್ಕೆ ಸಿಗುವ ಮಾದರಿಯಲ್ಲಿ ಯೋಜನೆ ರೂಪಿಸಬೇಕು ಎಂದರು. ವೇದಿಕೆಯಲ್ಲಿ ನಿವೃತ್ತ ಸಿಆರ್‌ಪಿಎಸ್ ಉಪ ನಿರೀಕ್ಷಕಿ ಚೋಯಮಾಡಂಡ ಪವಿತ್ರ ಸನ್ನು ಇದ್ದರು.
ಕಿಗ್ಗಟ್ಟ್ ನಾಡ್ ಫ್ಲೈಯಿಂಗ್ ಎಲ್ಬೋಸ್ ಸಂಘಟನೆ ಪ್ರಮುಖರಾದ ಮಾಚಿಮಾಡ ಕಾರ್ಯಪ್ಪ, ಮಲ್ಲಮಾಡ ಸನತ್, ಚಿರಿಯಪಂಡ ಪವನ್ ಬಿದ್ದಪ್ಪ, ಪೆಮ್ಮಂಡ ಧರ್ಮಜ, ಪೋರಂಗಡ ಪವನ್ ಬಿದ್ದಪ್ಪ, ಪೆಮ್ಮಂಡ ಧರ್ಮಜ, ಪೋರಂಗಡ ಪ್ರಥ್ವಿ, ಮೇಚಮಾಡ ಅಪ್ಪಚ್ಚು, ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ವೀಕ್ಷಣೆ ವಿವರಣೆಗಾರ ಚೆಪ್ಪುಡೀರ ಎ.ಕಾರ್ಯಪ್ಪ ವೀಕ್ಷಣೆ ವಿವರಣೆ ನೀಡಿದರು. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಹಾಕಿ ಕ್ರೀಡೆಯನ್ನು ವೀಕ್ಷಿಸಿದರು. ಮಳೆ ಸಿಂಚನದ ನಡುವೆ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾ ಪ್ರೇಮಿಗಳನ್ನು ರಂಜಿಸಿದರು.