

ಕೂಡಲಸಂಗಮ: ಎರಡು ದಿನಗಳಿಂದ ಅಧಿಕ ಪ್ರಮಾಣದ ನೀರು ಮಲಪ್ರಭಾ ನದಿಗೆ ಹರಿದು ಬಂದಿದ್ದರಿಂದ ಆತಂಕಕ್ಕೆ ಒಳಗಾಗಿದ್ದ ನದಿ ದಡದ ರೈತರು, ಗ್ರಾಮಸ್ಥರು ಮಂಗಳವಾರ ನಿರಾಳರಾಗಿದ್ದಾರೆ. ಬೆಳಗ್ಗೆಯಿಂದಲೇ ನದಿ ನೀರು ಇಳಿಮುಖಗೊಳ್ಳುತ್ತಿದೆ.
ನದಿ ದಡದ ರೈತರ ಜಮೀನಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ಕಿತ್ತು ಹಾಕಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಬೆಳೆ ನೀರಲ್ಲಿ ಕೊಚ್ಚಿಹೋಗಿದೆ.
ಎರಡು ದಿನ ನೀರು ನಿಂತಿದ್ದರಿಂದ ಇನ್ನೂ 15 ದಿನ ಜಮೀನಿಗೆ ಹೋಗಲು ಆಗುವುದಿಲ್ಲ. ಜಮೀನು ಸಂಪೂರ್ಣ ಕೆಸರಿನಿಂದ ಕೂಡಿದೆ ಎಂದು ರೈತ ಸಂಗಪ್ಪ ಕುರಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರ ಬೆಳಗಲ್ಲ ಸೇತುವೆ ಬಳಿ ಮಲಪ್ರಭಾ ನದಿ ತೀರದ ರೈತರ ಜಮೀನಿಗೆ ನೀರು ನುಗ್ಗಿ ವಿಶಾಲವಾಗಿ ಹರಡಿಕೊಂಡಿರುವ ದೃಶ್ಯವನ್ನು ಜನತೆ ವೀಕ್ಷಿಸುತ್ತಿರುವುದು ಕಂಡು ಬಂದಿತು.