

ಹೊಳೆನರಸೀಪುರ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ವಾಡಿಕೆಯಂತೆ ಬೀಳದ ಪರಿಣಾಮ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗದೆ ಮೀನು ಉತ್ಪಾದನೆಗೆ ಹಿನ್ನಡೆ ಉಂಟಾಗಿದೆ.
ವರುಣನ ಅವಕೃಪೆಯಿಂದಾಗಿ ಮೀನು ಸಾಕಣೆದಾರರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದ್ದು, ಉತ್ತಮ ತಳಿಯ ಮೀನು ದೊರೆಯದೆ ಮೀನು ಸೇವನೆ ಪ್ರಿಯರಿಗೆ ನಿರಾಸೆ ಉಂಟಾಗಿದೆ. ಉತ್ತಮ ಮಳೆಯಾಗದಿರುವ ಕಾರಣ ಕೆರೆ-ಕಟ್ಟೆಗಳು ಖಾಲಿಯಾಗಿದ್ದು ಮೀನು ಸಾಕಣೆ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ.
ಕಳೆದ ಸಾಲಿನಲ್ಲಿ ಅಧಿಕ ಮಳೆಯಾಗಿದ್ದರಿಂದ ಮೀನು ಉತ್ಪಾದನೆಗೆ ಧಕ್ಕೆ ಉಂಟಾಗಿರಲಿಲ್ಲ. ತಾಲೂಕಿನ ಹಲವು ಕೆರೆಕಟ್ಟೆಗಳು ಭರ್ತಿಯಾಗಿದ್ದರಿಂದ ಮೀನಿನ ಉತ್ಪಾದನೆ ಹೆಚ್ಚಿತ್ತು. ಬೇಸಿಗೆ ಸಮಯದಲ್ಲೂ ಮೀನು ಉತ್ಪಾದನೆಯಾಗಿತ್ತು. ಪ್ರಸಕ್ತ ಸಾಲಿನ ಜೂನ್‌ನಲ್ಲಿ ಮೀನು ಉತ್ಪಾದಕರು ಕೆರೆ ಕಟ್ಟೆಗಳಲ್ಲಿ ಸಂಗ್ರಹವಾಗಿದ್ದ ನೀರಿಗೆ ಮೀನಿನ ಮರಿಗಳನ್ನು ಬಿಟ್ಟಿದ್ದರು. ಆದರೆ ಮುಂಗಾರು ಮಳೆ ಕೈ ಕೊಟ್ಟಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗದೆ ನೀರಿಗೆ ಬಿಟ್ಟ ಮೀನಿನ ಮರಿಗಳು ನಾಶವಾಗಿವೆ. ಇದು ಮೀನು ಉತ್ಪಾದಕರು ಆರ್ಥಿಕವಾಗಿ ಕೈ ಸುಟ್ಟುಕೊಳ್ಳುವಂತೆ ಮಾಡಿದೆ.
ತಾಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ಮೀನುಮರಿ ಪಾಲನಾ ಕೇಂದ್ರವಿದ್ದು, ವಿವಿಧ ತಳಿಯ ಮೀನು ಮರಿಗಳನ್ನು ಹಣ ಪಡೆದು ವಿತರಿಸಲಾಗುತ್ತಿದೆ. ತಾಲೂಕಿನ ಕೆರೆಗಳಿಗೆ ಸ್ಥಳೀಯವಾಗಿ ದೊರೆಯುವ ದೊಡ್ಡ ಬಾಯಿ ಕಾಟ್ಲಾ, ಚಿಕ್ಕ ಬಾಯಿ ಕಾಟ್ಲ, ರೋಹು, ಮೃಹಲ್, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ, ಬೆಳ್ಳಿ ಗೆಂಡೆ, ಜಿಲೇಬಿ, ಬಾಚಣಿಗೆ, ಭಾರತೀಯ ಕ್ಯಾಟ್ಫಿಶ್, ಕೊಲ್ಲು ಕೊರೆತ, ಹಾವು ಬತ್ತಿ ಮೀನು, ಗೊಜ್ಜಲೆ, ಗಿರ್ಲು.. ಹೀಗೆ ಹಲವು ಜಾತಿಯ ಮೀನು ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ.
ನದಿ ಹಾಗೂ ಕೆರೆಗಳ ಮೂಲಗಳಿಂದ ದೊರೆಯುವ ಮೀನುಗಳ ಮಾರಾಟದಿಂದ ಇಲಾಖೆಗೆ ಪ್ರತಿ ವರ್ಷ ಆದಾಯ ಬರುತ್ತಿದೆ. 40 ಹೆಕ್ಟೇರ್‌ಗಿಂತ ಹೆಚ್ಚು ಅಚ್ಚುಕಟ್ಟು ಪ್ರದೇಶವುಳ್ಳ 11 ಕೆರೆಗಳು ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಪ್ರಸ್ತುತ 6 ಕೆರೆಗಳು ಮೀನು ಉತ್ಪಾದನೆಗೆ ನವೀಕರಣಗೊಂಡಿದ್ದು 3,78,203 ರೂ. ಆದಾಯ ತಂದುಕೊಟ್ಟಿವೆ. ಇನ್ನುಳಿದಂತೆ 5 ಕೆರೆಗಳ ಟೆಂಡರ್ ಈಗ ನಡೆಯಬೇಕಿದೆ. ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 40 ಹೆಕ್ಟೇರ್‌ಗಿಂತ ಕಡಿಮೆ ಅಚ್ಚುಕಟ್ಟು ಪ್ರದೇಶವುಳ್ಳ 535 ಕೆರೆಕಟ್ಟೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ.
ತಾಲೂಕಿನ ಹೇಮಾವತಿ ನದಿ ಭಾಗ -1ರ ಪಡುವಲಹಿಪ್ಪೆ, ಹರದನ ಕೊಲ್ಲಿಯಿಂದ ಸೂರನಹಳ್ಳಿ , ನದಿ ಭಾಗ-2ರ ಮೂಡಲಹಿಪ್ಪೆ ತಟ್ಟೆಕೆರೆಯಿಂದ ಈಡಿಗನ ಹೊಸೂರು ವ್ಯಾಪ್ತಿಯ ನದಿ ಭಾಗಗಳಿಗೆ ಸಂಬಂಧಿಸಿದಂತೆ ಪ್ರಸ್ತುತ 54 ಪರವಾನಗಿಗಳಿದ್ದು, ಇವುಗಳಿಂದ 81,000 ರೂ. ಆದಾಯ ಬರುತ್ತಿದೆ. ಕಳೆದ ವರ್ಷ 52 ಪರವಾನಗಿಗಳಿದ್ದು, 78,000 ರೂ. ಆದಾಯ ಬಂದಿತ್ತು. ಆ.1 ರಿಂದ ಜೂ.30ರವರೆಗೆ ನವೀಕರಣ ಮತ್ತು ಹೊಸ ಪರವಾನಗಿಗೆ ಅವಕಾಶವಿರುತ್ತದೆ.
ಮೀನು ಹಿಡುವಳಿ ಮತ್ತು ಮೀನು ಮಾರಾಟಕ್ಕೆ ಗಂಗಾಭವಾನಿ ಮೀನುಗಾರರ ಸಹಕಾರ ಸಂಘ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಸಾಕಣೆ ಹಾಗೂ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕೆರೆ ಮತ್ತು ನದಿ ಭಾಗಗಳಿಂದ 200 ಟನ್ ಮೀನು ಸಂಗ್ರಹವಾಗಿದ್ದು ಕಳೆದ ಸಾಲಿನಲ್ಲಿ 500 ಟನ್ ಮೀನು ಹಿಡುವಳಿಯಾಗಿತ್ತು. ಅಂಕಿ -ಅಂಶ ಗಮನಿಸಿದರೆ ಮೀನು ಉತ್ಪಾದನೆಯಲ್ಲಿ ಬಾರಿ ಹಿನ್ನಡೆ ಉಂಟಾಗಿದೆ.
ಕೃಷಿ, ತೋಟಗಾರಿಕೆ, ಹೈನುಗಾರಿಕೆಗೊಂದಿಗೆ ರೈತರು ಮೀನು ಸಾಕಣೆ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಕೃಷಿ ಹೊಂಡಗಳಲ್ಲಿ ಮೀನು ಸಾಕಣೆ ಮಾಡಬಹುದಾಗಿದ್ದು, ಅರ್ಧ ಎಕರೆಯಷ್ಟನ್ನು ಮೀನು ಸಾಕಣೆಗೆಂದು ಕಾಯ್ದಿರಿಸಿಕೊಂಡರೆ ಮೀನುಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಸಂಪದ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ 56,000 ರೂ. ಮತ್ತು ಪರಿಶಿಷ್ಟ ಜಾತಿ-ಪಂಗಡ, ಹಾಗೂ ಮಹಿಳೆಯರಿಗೆ 84,000 ರೂ. ಸಹಾಯ ಧನ ಪಡೆಯಬಹುದಾಗಿದೆ.
ಪರವಾನಗಿ ಪಡೆದು ನೀನು ಮಾರಾಟ ಮಾಡುವವರಿಗೆ 30,000 ರೂ.ಸಹಧಾನ, ದ್ವಿಚಕ್ರ ವಾಹನವನ್ನೂ ನೀಡಲಾಗುತ್ತದೆ. ಮಳೆ ಅಭಾವದಿಂದ ಬರಗಾಲ ಸೃಷ್ಟಿಯಾಗಿದ್ದು ಕೆರೆಗಳಲ್ಲಿ ನೀರು ಬರಿದಾಗಿದೆ. ಹೊಳೆನರಸೀಪುರ ತಾಲೂಕನ್ನು ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿದರೆ ಕೆರೆಗಳನ್ನು ಟೆಂಡರ್ ಪಡೆದಿರುವವರಿಗೆ ಟೆಂಡರ್ ಮೊತ್ತದಲ್ಲಿ ಸ್ವಲ್ಪ ಮಟ್ಟಿಗೆ ಸಬ್ಸಿಡಿ ದೊರೆಯಲಿದೆ. ಇಲ್ಲವಾದರೆ ಟೆಂಡರ್ ಅನ್ನು ಒಂದು ವರ್ಷ ಹೆಚ್ಚಿಗೆ ಮುಂದುವರಿಸಬಹುದಾಗಿದೆ.
ಕೆ.ಎಸ್.ಸುಮಾ ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಹೊಳೆನರಸೀಪುರ
ಸ್ಥಳೀಯವಾಗಿ ಉತ್ತಮ ದರ್ಜೆಯ ಮೀನುಗಳ ಕೊರತೆ ಇದೆ. ಮಂಜುಗಡ್ಡೆಯಲ್ಲಿ ಸಂಗ್ರಹಿಸಿದ ಮೀನುಗಳನ್ನು ಹೊರ ರಾಜ್ಯಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಆದರೆ, ಉತ್ತಮ ಮಾರುಕಟ್ಟೆ ಇಲ್ಲ. ಮಾರಾಟಗಾರರು ಕೇಳಿದಷ್ಟು ಹಣ ನೀಡಿ ಕೊಳ್ಳುವಂತಾಗಿದೆ. ಮಳೆಯಾಗದೆ ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗದ ಕಾರಣ ಮೀನು ಸಾಕಣೆದಾರರು ಮತ್ತು ಮೀನುಪ್ರಿಯರಿಗೆ ವಿವಿಧ ಜಾತಿಯ ಮೀನಿನ ಖಾದ್ಯ ದೊರೆಯುತ್ತಿಲ್ಲ. ಬರಗಾಲದಿಂದಾಗಿ ಇಂತಹ ಸಮಸ್ಯೆ ಎದುರಾಗಿದೆ.
ಡಿ.ಬಿ.ದೇವರಾಜೇಗೌಡ, ಹೌಸಿಂಗ್ ಬೋರ್ಡ್ ನಿವಾಸಿ, ಹೊಳೆನರಸೀಪುರ
ಮೀನು ಉತ್ಪಾದನೆ ಕಡಿಮೆಯಾಗಿ ಆರ್ಥಿಕ ನಷ್ಟವಾಗಿ ತೊಂದರೆ ಅನುಭವಿಸುವಂತಾಗಿದೆ. ಜೂನ್‌ನಲ್ಲಿ ಮೀನುಗಾರಿಕೆ ಇಲಾಖೆಯಿಂದ ಒಂದು ಮೀನು ಮರಿಗೆ 1 ರಿಂದ 1.50 ರೂ. ನೀಡಿ ಖರೀದಿಸಿ ಮರಿಗಳನ್ನು ಕೆರೆಗಳಿಗೆ ಬಿಡಲಾಗಿತ್ತು. ಮುಂಗಾರು ಹಿನ್ನಡೆಯಾಗಿದ್ದರಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಬೇಸಿಗೆ ಬಿಸಲಿಗೆ ಮರಿಗಳು ಸತ್ತು ಹೋದವು. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಮೀನುಗಳ ಉತ್ಪಾದನೆ ಕುಂಠಿತಗೊಂಡಿದೆ. ಹೊರ ರಾಜ್ಯಗಳಿಂದ ಮೀನು ಖರೀದಿಸಿ ಮಾರಾಟ ಮಾಡಬೇಕಾಗಿದೆ. ಮೀನು ಸಾಕಣೆ ಮಾಡುವವರಿಗೆ ಆರ್ಥಿಕ ನಷ್ಟವಾಗಿದ್ದು, ಇಲಾಖೆಯಿಂದ ಸಹಾಯಹಸ್ತ ದೊರೆಯಬೇಕಾಗಿದೆ.
ಮಹೇಶ್ ಮೀನು ಮಾರಾಟಗಾರ, ಹೊಳೆನರಸೀಪುರ