ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿತ

Published on

ಕುಂದಾಪುರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಇಲಾಖೆ, ಶಿಕ್ಷಕರು ಪ್ರಯತ್ನ ಪಡುತ್ತಿರುವ ನಡುವೆಯೇ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ. 5 ತರಗತಿಗಳಿದ್ದರೂ ಕೇವಲ ಮೂರ್ನಾಲ್ಕು ವಿದ್ಯಾರ್ಥಿಗಳು ಇರುವ ಶಾಲೆಗಳೂ ಇವೆ. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೂ ಅನುದಾನ ಸರಿಯಾಗಿ ನೀಡದೆ, ಶಿಕ್ಷಕರನ್ನೂ ನಿಯೋಜಿಸದೆ ಮಕ್ಕಳ ಸಂಖ್ಯೆ ಹೆಚ್ಚುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಬವಿಸಿದೆ. ಲಕ್ಷಾಂತರ ರೂ. ಖರ್ಚು: ಯಾವುದೇ ಶಾಲೆಯನ್ನು ಮುಚ್ಚುವ ಪ್ರಸ್ತಾಪ ಸರಕಾರದ ಮುಂದೆ ಸದ್ಯ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಮುಚ್ಚುವ ಬದಲು ಹತ್ತಿರದ ಶಾಲೆಗಳ ಜತೆ ಜೋಡಿಸುವ ಸಾಧ್ಯತೆ ಇದೆ. ಮೂರೇ ಮಕ್ಕಳಿರು ಶಾಲೆಗಳೂ ಸರ್ಕಾರ ವಾರ್ಷಿಕ ಲಕ್ಷಾಂತರ ರೂ. ಖರ್ಚು ಮಾಡುತ್ತದೆ ಎನ್ನುವುದು ಗಮನಾರ್ಹ. ಶಿಕ್ಷಕರಿಗೆ ಮಾಸಿಕ 70ರಿಂದ 90 ಸಾವಿರ ರೂ. ವೇತನ, ಅಡುಗೆಯವರಿಗೆ ವೇತನ, ಅಡುಗೆಗೆ ಸಾಮಗ್ರಿ ಪೂರೈಕೆ, ಸಾಗಾಟ, ಅಡುಗೆ ಅನಿಲ, ಹಾಲು, ಮೊಟ್ಟೆ, ಬಾಳೆಹಣ್ಣು, ಪುಸ್ತಕ, ಶೂ, ಸಮವಸ್ತ್ರ, ವಿದ್ಯುತ್ ಹೀಗೆ ಪ್ರಾಥಮಿಕ ತರಗತಿ ಮಕ್ಕಳಿಗೂ ಸರ್ಕಾರ ಲಕ್ಷಾಂತರ ರು. ವ್ಯಯಿಸುತ್ತಿದೆ. ಆದರೆ ಅಗತ್ಯದಷ್ಟು ಶಿಕ್ಷಕರಿಲ್ಲದಿರುವುದು, ಆಂಗ್ಲ ಭಾಷಾ ವ್ಯಾಮೋಹದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ.  ಕಡಿಮೆ ದಾಖಲಾತಿ: ಕುಂದಾಪುರ ಶೈಕ್ಷಣಿಕ ವಲಯದ 47 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಒಟ್ಟು 58 ಶಾಲೆಗಳಲ್ಲಿ 40ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಈ ವರ್ಷ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ 804, ಅನುದಾನ ರಹಿತದಲ್ಲಿ 43 ಮಕ್ಕಳು ಒಟ್ಟು 847 ಮಕ್ಕಳು ದಾಖಲಾಗಿದ್ದಾರೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ 8,580, ಅನುದಾನಿತ ಶಾಲೆಗಳಲ್ಲಿ 1,116, ಅನುದಾನ ರಹಿತದಲ್ಲಿ 580, ವಸತಿ ಶಾಲೆಗಳಲ್ಲಿ 221 ಮಕ್ಕಳು ದಾಖಲಾಗಿದ್ದಾರೆ. ಪ್ರೌಢಶಾಲೆ ವಿಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ 13,473, ಅನುದಾನಿತದಲ್ಲಿ 1,987, ಅನುದಾನ ರಹಿತದಲ್ಲಿ 12,618, ವಸತಿ ಶಾಲೆಗಳಲ್ಲಿ 624 ಮಕ್ಕಳು ಸೇರಿದಂತೆ ಒಟ್ಟು 28,702 ಮಕ್ಕಳು ದಾಖಲಾಗಿದ್ದಾರೆ.

ಶಿಕ್ಷಕರ ಹುದ್ದೆಗಳು ಖಾಲಿ

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 93 ಶಿಕ್ಷಕರ ಹುದ್ದೆ ಖಾಲಿ ಇದೆ. ಇದರಲ್ಲಿ 63 ಹುದ್ದೆಗೆ ಅತಿಥಿ ಶಿಕ್ಷಕರ ನೇಮಕವಾಗಿದೆ. ಉಳಿಕೆ ಪ್ರಕ್ರಿಯೆ ಚಾಲನೆಯಲ್ಲಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 35 ಶಿಕ್ಷಕರ ಹುದ್ದೆ ಖಾಲಿ ಇದ್ದು 34 ಹುದ್ದೆಗೆ ಅತಿಥಿ ಶಿಕ್ಷಕರ ನೇಮಕವಾಗಿದೆ.

ಯಾವುದೇ ಶಾಲೆಯನ್ನು ಮುಚ್ಚುವ ಪ್ರಸ್ತಾಪ ಇಲ್ಲ. ದಾಖಲಾತಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿವಿಧೆಡೆ ಶಿಕ್ಷಕರು ವಿಶೇಷ ಪ್ರಯತ್ನ ವಾಡಿದ್ದಾರೆ. ಕಡಿಮೆ ಸಂಖ್ಯೆಯ ಮಕ್ಕಳಿದ್ದರೂ ಎಲ್ಲ ಸೌಲಭ್ಯಗಳನ್ನೂ ನೀಡಲಾಗುತ್ತದೆ. ಶೋಭಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕುಂದಾಪುರ ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net