ಹೊನ್ನಾಳಿ: ಯಾರು ಸ್ವ ಇಚ್ಛೆಯಿಂದ ವಿದ್ಯುತ್ ಬಿಲ್ ಪಾವತಿಸುತ್ತಾರೋ ಅಂತಹವರಿಂದ ಮಾತ್ರ ಕಟ್ಟಿಸಿಕೊಳ್ಳಿ. ವಿನಾಕಾರಣ ಗ್ರಾಹಕರ ಜತೆ ವಾಗ್ವಾದಕ್ಕೆ ಇಳಿಯದಂತೆ ಬೆಸ್ಕಾಂ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೊನ್ನಾಳಿ ಬೆಸ್ಕಾಂ ಎಇಇ ಶ್ರೀನಿವಾಸ್ ಬಿ.ಕೆ. ತಿಳಿಸಿದರು.
ನೂತನ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಹಲವೆಡೆ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿದ್ದಾರೆ. ಕೊಪ್ಪಳದಲ್ಲಿ ಈಗಾಗಲೇ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೆ ಬಿಲ್ ಪಾವತಿಸುವಂತೆ ಸಿಬ್ಬಂದಿ ಮನವಿ ಮಾಡುತ್ತಿದ್ದರೂ ಅನೇಕ ಗ್ರಾಹಕರು ಒಪ್ಪುತ್ತಿಲ್ಲ ಎಂದರು.
ಪ್ರತಿ ತಿಂಗಳು 1- 15 ರವರೆಗೆ ವಿದ್ಯುತ್ ಬಿಲ್ ನೀಡಲಾಗುತ್ತದೆ. 30 ರೊಳಗೆ ಶೇ. 70 ರಿಂದ 75ರಷ್ಟು ಗ್ರಾಹಕರು ಬಿಲ್ ಪಾವತಿಸುತ್ತಿದ್ದರು. ಆದರೆ, ಉಚಿತ ಕೊಡುಗೆಯ ಭರವಸೆ ಹಿನ್ನೆಲೆಯಲ್ಲಿ ಈ ತಿಂಗಳು ಬಿಲ್ ಸಂದಾಯ ಕುಸಿದಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಯೋಜನೆ ಅನುಷ್ಠಾನಗೊಳ್ಳುವವರೆಗೂ ಬಿಲ್ ಕಟ್ಟಿಸಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ, ಕೆಲ ಗ್ರಾಹಕರು ಇದನ್ನರ್ಥಮಾಡಿಕೊಳ್ಳದೇ ಸಿಬ್ಬಂದಿ ಜತೆ ವಾಗ್ವಾದಕ್ಕೆ ಇಳಿಯುತ್ತಾರೆ ಎಂದು ಬೇಸರಿಸಿದರು.
ಹೀಗಾಗಿ ಬಿಲ್ ಪಾವತಿ ವಿಚಾರದಲ್ಲಿ ಗ್ರಾಹಕರ ಜತೆ ವಾಗ್ವಾದಕ್ಕೆ ಇಳಿಯದಂತೆ ಸೂಚಿಸಿದ್ದೇವೆ ಎಂದರು.