

ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಹಾಗೂ ಪ್ರಕೃತಿ ತಾಣ ಕರಿಘಟ್ಟ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿ ಘೋಷಿಸುವ ಜತೆಗೆ ಮದ್ಯಪಾನ ನಿಷೇಧಿತ ಸ್ಥಳವನ್ನಾಗಿ ನಿರ್ಮಿಸಬೇಕಿದೆ ಎಂದು ಪರಿಸರ ಪ್ರೇಮಿ ರಮೇಶ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಶುಕ್ರವಾರ ಮೈಸೂರಿನ ಗೀತಾ ಶಿಶು ಶಿಕ್ಷಣ ಸಂಸ್ಥೆ(ಜಿಎಸ್‌ಎಸ್‌ಎಸ್)ಯ 50 ವಿದ್ಯಾರ್ಥಿಗಳೊಂದಿಗೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಿಘಟ್ಟ ಬೆಟ್ಟ ಹಸಿರು ಸಸ್ಯಕಾಶಿ ಹೊದ್ದಿರುವ ಪ್ರಕೃತಿದತ್ತ ದೈವಿಕ ತಾಣ. ಈ ತಾಣದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿಸಬೇಕು. ಜತೆಗೆ ಈ ಸ್ಥಳದಲ್ಲಿ ಕೆಲವರು ಕುಡಿದು ಎಸೆಯುವ ಮದ್ಯದ ಬಾಟಲಿಗಳನ್ನು ತಡೆಗಟ್ಟುವ ಜತೆಗೆ ದುಶ್ಚಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಟ್ಟದ ಮೇಲೆ, ಕೆಳಗೆ ಹಾಗೂ ಮಧ್ಯಭಾಗದ ಆಯ್ದ ಕೆಲ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ಬೆಟ್ಟದ ತಪ್ಪಲಿನ ಸಿಡಿಎಸ್ ನಾಲೆ ಏರಿಯ ಆಸು-ಪಾಸು, ಬೆಟ್ಟದ ಮೆಟ್ಟಿಲುಗಳ ಬದುಗಳ ಇಕ್ಕೆಲಗಳು, ವೀಕ್ಷಣಾ ಸ್ಥಳದ ಗುಡ್ಡ, ಅರಣ್ಯ ಇಲಾಖೆಯ ಟ್ರೀ ಪಾರ್ಕ್, ಬೆಟ್ಟದ ಏರು ರಸ್ತೆಯ ತಿರುವುಗಳ ತಡೆಗೋಡೆ ಹಾಗೂ ದೇಗುಲದ ಸುತ್ತಮುತ್ತ ಕೈಯಲ್ಲಿ ಬೃಹತ್ ಚೀಲಗಳನ್ನು ಹಿಡಿದು ಸುಮಾರು 5 ತಾಸುಗಳ ಕಾಲ ಶ್ರಮದಾನ ನಡೆಸಿ 20ಕ್ಕೂ ಹೆಚ್ಚು ಚೀಲಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ತುಂಬಲಾಯಿತು.
ಶ್ರಮದಾನ ಕಾರ್ಯದಲ್ಲಿ ಜಿಎಸ್‌ಎಸ್‌ಎಸ್ ಸಂಸ್ಥೆ ಉಪನ್ಯಾಸಕರಾದ ರವಿಕಿರಣ್, ನಾಗರತ್ನಾ, ಪುನೀತ್ ಇತರರು ಇದ್ದರು.