

ಮೈಸೂರು: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದನ್ನು ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ತೀರ್ಮಾನಿಸಿರುವುದು ಜನತೆಗೆ ಸಂತೋಷವನ್ನು ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಭೂತಪೂರ್ವ ಶರಣ ಚಳವಳಿಯ ಮುಂಚೂಣಿಯಲ್ಲಿ ನಿಂತು ಸರ್ವಸಮಾನತೆಯನ್ನು ತರಬಯಸಿದ ಬಸವಣ್ಣನವರು ಒಬ್ಬ ಸೀಮಾಪುರುಷರು. ಜಾತಿ ವ್ಯವಸ್ಥೆ, ಅದರ ಮೂಲಕ ಪ್ರಬಲವಾಗಿದ್ದ ಮೇಲು-ಕೀಳುಗಳ ಪರಿಗಣನೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. ಅದುವರೆಗೆ ಸಮಾಜದ ಅತ್ಯಂತ ಕೆಳಸ್ತರದಲ್ಲಿದ್ದ ಎಲ್ಲರನ್ನೂ ಅಣ್ಣ, ಅಪ್ಪ ಎಂದು ಕರೆದರು. ಹಾಗೆಯೇ ಲಿಂಗಸಮಾನತೆಯನ್ನು ಸಾರಿದರು. ಭಕ್ತಿಭಂಡಾರಿಗಳಾಗಿದ್ದ ಅವರು ಕಾಯಕ, ದಾಸೋಹಗಳ ಮೂಲಕ ಹೊಸ ಸಮಾಜವನ್ನು ನಿರ್ಮಿಸಿದರು. ಅಧ್ಯಾತ್ಮಜ್ಞಾನವನ್ನು ಮಾತೃಭಾಷೆ ಕನ್ನಡದಲ್ಲೂ ಹೇಳಬಹುದೆಂದು ತೋರಿಸಿಕೊಟ್ಟರು. ದೀನದಲಿತರು, ಮಹಿಳೆಯರು ತಮ್ಮ ಸಾಧನೆಗಳ ವಿಚಾರವಿನಿಮಯಕ್ಕೆ ಮಹಾಮನೆಯ ಆಶ್ರಯ ನಡೆದಿತ್ತು. ಅಲ್ಲಿ ಹೊಟ್ಟೆಗೂ ಆಹಾರ, ಚಿಂತನೆಗೂ ಆಹಾರ! ಅವರು ಕಂಡರಿಸಿದ ಅನುಭವ ಮಂಟಪದ ಅಂಗಳದಲ್ಲಿ ಜಿಜ್ಞಾಸುಗಳ ಸಂವಾದ ನಡೆಯುತ್ತಿತ್ತು. ಜನಕಲ್ಯಾಣವನ್ನು ಸಾಧಿಸಿದ ಕಲ್ಯಾಣದಲ್ಲಿ ಜನರು ಎಲ್ಲರನ್ನೂ ‘ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎನ್ನತೊಡಗಿದರು.
ಇಂಥ ಎಲ್ಲರ ಬಾಳಿನ ಬೆಳಕಾಗಿದ್ದ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಕರೆದು ಗೌರವಿಸಿರುವ ಕರ್ನಾಟಕ ಸರ್ಕಾರಕ್ಕೆ ಸಮಸ್ತರ ಅಭಿನಂದನೆ ಸಲ್ಲುತ್ತದೆ. ಇದರೊಂದಿಗೆ ಸಮಸಮಾಜದ ಕನಸನ್ನು ನನಸು ಮಾಡಲು ಎಲ್ಲರೂ ತ್ರಿಕರಣಪೂರ್ವಕವಾಗಿ ಶ್ರಮಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.