ಸೊರಬ ತಾಲೂಕನ್ನು ಬರಪೀಡಿತವೆಂದು ಘೋಷಿಸಿ

1sor1
ಸೊರಬ ತಾಲೂಕನ್ನು ಬರ ಪೀಡಿತವೆಂದು ಘೋಷಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಈಶ್ವರಪ್ಪ ಕೊಡಕಣಿ, ಉಮೇಶ್ ಪಾಟೀಲ್, ನಾಗರಾಜ ಬೆಣ್ಣಿಗೇರಿ, ಮೇಘರಾಜ ಬೆಟ್ಟದಕೂರ್ಲಿ ಇತರರಿದ್ದರು.
Published on

ಸೊರಬ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಹುಸೇನ್ ಸರಕಾವಸ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಳೆ ಇಲ್ಲದೆ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ನಾಟಿ ಮಾಡಿದ ಭತ್ತದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಮತ್ತು ಭತ್ತದ ಭೂಮಿಗೆ ಪ್ರತಿ ಎಕರೆಗೆ 30 ಸಾವಿರ ರೂ. ಬೆಳೆ ಪರಿಹಾರವನ್ನು ನೀಡಬೇಕು. ರೈತರ ಪಂಪ್‌ಸೆಟ್‌ಗೆ ಮೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ರೈತರೊಂದಿಗೆ ಕಣ್ಣಾಮುಚ್ಚಾಲೆ ಆಡುವುದು ಬಿಟ್ಟು ಹಗಲು ವೇಳೆಯಲ್ಲಿ 3 ಫೇಸ್ ವಿದ್ಯುತ್‌ನ್ನು 7 ತಾಸು ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಹಾನಿಗೀಡಾಗಿದ್ದು ರೈತರ ಬದುಕು ದುಸ್ತರವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಸರ್ಕಾರಗಳು ಕೈ ಹಿಡಿಯಬೇಕು. ರಾಜ್ಯ ಸರ್ಕಾರ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ಏಳು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ರೈತರ ಎಲ್ಲ ಸಾಲಗಳನ್ನು ಈ ವರ್ಷ ಕೈಬಿಟ್ಟು ಅವರನ್ನು ಋಣಮುಕ್ತರನ್ನಾಗಿ ಮಾಡಬೇಕು. ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಯಾವುದೇ ಕಾರಣದಿಂದಲೂ ರೈತರನ್ನು ಸಾಲ ಕಟ್ಟಲು ಒತ್ತಾಯಿಸದಂತೆ ಸುತ್ತೋಲೆ ಹೊರಡಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕೈಗೊಳ್ಳಬೇಕು. ಜತೆಗೆ 2022ನೇ ಸಾಲಿನಲ್ಲಿ ತೋಟಗಾರಿಕೆ ಹಾಗೂ ಇತರ ಬೆಳೆಗಳಿಗೆ ವಿಮೆ ಕಟ್ಟಿದ ರೈತರ ಖಾತೆಗೆ ಕೂಡಲೆ ಬೆಳೆವಿಮೆ ಹಣ ಜಮಾ ಮಾಡಬೇಕು. ರೈತರ ಬಗ್ಗೆ ಅರಿವನ್ನು ಹೊಂದಿರುವ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಉಪಾಧ್ಯಕ್ಷ ನಾಗರಾಜ್ ಬೆಣ್ಣಿಗೇರಿ, ಪ್ರಧಾನ ಕಾರ್ಯದರ್ಶಿ ಮೇಘರಾಜ್ ಬೆಟ್ಟದಕೂರ್ಲಿ, ರೈತ ಮುಖಂಡರಾದ ಸುರೇಶ್ ನಾಯ್ಕ, ಹನುಮಂತಪ್ಪ ಬಾವಿಕಟ್ಟಿ, ಶಿವಪ್ಪ ಹುಣಸವಳ್ಳಿ, ಬಾಷಾ ಸಾಬ್ ಆರೇಕೊಪ್ಪ, ವೀರನಗೌಡ ಗಿಣಿವಾಲ, ಈರಮ್ಮ ಆನವಟ್ಟಿ, ನಾಗಮ್ಮ ಆನವಟ್ಟಿ, ಡಿಎಸ್‌ಎಸ್ ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ತಾಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net