ಜಮಖಂಡಿಯನ್ನು ಜಿಲ್ಲೆಯಾಗಿ ಘೋಷಿಸಿ

Declare Jamkhandi as a district
ಜಮಖಂಡಿ ನಗರದ ರಮಾ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಉಮೇಶ ಆಲಮೇಲಕರ ಮಾತನಾಡಿದರು. ರಾಯಬಾ ಜಾಧವ, ಪ್ರಶಾಂತ ಶಂಕರೆಪ್ಪಗೋಳ, ಮುತ್ತೂ ಲಕ್ಕನಗೌಡರ ಇದ್ದಾರೆ.
Published on

ಜಮಖಂಡಿ: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿ ಜಮಖಂಡಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂದು ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಉಮೇಶ ಆಲಮೇಲಕರ ಒತ್ತಾಯಿಸಿದರು.

ನಗರದ ರಮಾ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಗಣರಾಜ್ಯವಾಗುವ ಸಂದರ್ಭದಲ್ಲಿ ಪಟವರ್ದನ ಮಹಾರಾಜರು ಜಮಖಂಡಿ ಜಿಲ್ಲೆ, ಬಾಗಲಕೋಟ-ಕುಡಚಿ ರೈಲು ಮಾರ್ಗ, ಜಂಬಗಿ ಸೇತುವೆ ನಿರ್ಮಾಣದ ಪ್ರಮುಖ ಬೇಡಿಕೆಗಳನ್ನು ಇಟ್ಟು, 1948ರಲ್ಲಿಯೇ ಜಮಖಂಡಿ ಜಿಲ್ಲೆಗೆ ಬೇಕಾಗುವ ಹಣವನ್ನು ಮೀಸಲು ಇಟ್ಟಿದ್ದಾರೆ. ಜತೆಗೆ ಜಮಖಂಡಿ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಉಚ್ಚ ನ್ಯಾಯಾಲಯ ಆದೇಶ ಮಾಡಿದೆ. ಆದರೆ, ಇಲ್ಲಿಯವರೆಗೆ ಸರ್ಕಾರಗಳು ಅದನ್ನು ಕಾರ್ಯರೂಪಕ್ಕೆ ತರದೆ ನ್ಯಾಯಾಂಗ ನಿಂದನೆ ಮಾಡುತ್ತಿವೆ ಎಂದರು.

ಜಿಲ್ಲಾ ಸ್ಥಾನಮಾನಕ್ಕೆ ಬೇಡಿಕೆ ಇರುವ ಜಮಖಂಡಿ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಜಮಖಂಡಿ ನಗರದಲ್ಲಿ ತಾಲೂಕು ಮಟ್ಟದ ಮೂರು ನ್ಯಾಯಾಲಯಗಳು, ಜಿಲ್ಲಾ ಮಟ್ಟದ ತ್ವರಿತಗತಿ ನ್ಯಾಯಾಲಯಗಳು ಸೇರಿ ಒಟ್ಟು 5 ನ್ಯಾಯಾಲಯಗಳು ಹಾಗೂ ಎಆರ್‌ಟಿಒ, ಉಪವಿಭಾಗ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಜಮಖಂಡಿ ಜಿಲ್ಲೆ, ಸಾವಳಗಿ ಮತ್ತು ಮಹಾಲಿಂಗಪೂರವನ್ನು ತಾಲೂಕು ಕೇಂದ್ರಗಳನ್ನಾಗಿ ಘೊಷಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗುವುದು ಎಂದರು.

ರಾಯಬಾ ಜಾಧವ, ಪ್ರಶಾಂತ ಶಂಕರೆಪ್ಪಗೋಳ, ಮುತ್ತೂ ಲಕ್ಕನಗೌಡರ, ರಾಜೇಶ ಲಗಳಿ, ಅರುಣ ಲಗಳಿ, ರವಿ ಗೊಳಸಂಗಿ, ಶ್ರೀಮಂತ ಅಂಗಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net