ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಣೆ ಮಾಡಿ

23 ckm 1
ಚಿಕ್ಕಮಗಳೂರು ಹೊರವಲಯದ ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ೨೫೬೮ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮವನ್ನುದ್ದೇಶಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಎಂ.ರುದ್ರಸ್ವಾಮಿ ಮಾತನಾಡಿದರು. ಬಿ.ಬಿ.ನಿಂಗಯ್ಯ, ರವೀಶ್ ಬಸಪ್ಪ, ಎಚ್.ಪಿ.ಮಂಜೇಗೌಡ, ವೇಲಾಯುಧನ್, ಕೆ.ಮಹಮದ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಭಗವಾನ್ ಬುದ್ಧರ ಜನ್ಮದಿನವಾದ ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾದಿನವನ್ನಾಗಿ ಘೋಷಣೆ ಮಾಡಿ ಗೌರವ ಸಲ್ಲಿಸುವಂತಾಗಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.

ನಗರದ ಹೊರವಲಯದ ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ೨೫೬೮ನೇ ಬುದ್ಧ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೌದ್ಧ ಧರ್ಮ ಜಗತ್ತಿನ ಶ್ರೇಷ್ಟ ಧರ್ಮದಲ್ಲಿ ಒಂದಾಗಿದೆ. ಮಾನವೀಯ ಮೌಲ್ಯವನ್ನು ಸಾರುವ ಬೌದ್ಧ ಧರ್ಮಕ್ಕೆ ಅಂಬೇಡ್ಕರ್ ಅವರು ಮತಾಂತರವಾಗುವ ಮೂಲಕ ಶೋಷಿತ ಸಮಾಜಕ್ಕೆ ಸರಿಯಾದ ದಾರಿ ತೋರಿದ್ದಾರೆ. ಅದರಂತೆ ದಲಿತ ಸಮೂಹ ಸಾಗುತ್ತಿದೆ ಎಂದು ಹೇಳಿದರು.
ತೇಗೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಜಿಲ್ಲೆಯ ಜನರ ಸರ್ವಜನಾಂಗದ ಏಳಿಗೆಗಾಗಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲ ಮಹನೀಯರ ಆದರ್ಶಗಳನ್ನು ಪ್ರಸಾರ ಮಾಡುವ ಕೇಂದ್ರವನ್ನಾಗಿ ಮಾಡುವ ಧ್ಯೇಯೋದ್ದೇಶಗಳನ್ನು ಹೊಂದಿದ್ದೇವೆ. ಹೀಗಾಗಿ ಸರ್ಕಾರ ಈ ಸಂಸ್ಥೆಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಹಿರಿಯ ಸಾಮಾಜಿಕ ಚಿಂತಕ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಎಂ.ರುದ್ರಸ್ವಾಮಿ ಮಾತನಾಡಿ, ಜಗತ್ತಿನಾದ್ಯಂತ ಬೌದ್ಧ ಧರ್ಮ ಅನುಸರಿಸಿ ಬುದ್ಧ ಪೌರ್ಣಿಮೆ ಆಚರಿಸಲಾಗುತ್ತಿದೆ. ವಿವೇಕಾನಂದರಂಥ ಮಹಾನ್ ದಾರ್ಶನಿಕರು ಬುದ್ಧನ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಬೌದ್ಧ ಧರ್ಮವೆಂದರೆ ಸರಿಯಾಗಿ ನಡೆಯುವುದು ಎಂದರ್ಥ. ಸಮಾನತೆಯ ವಿಚಾರಧಾರೆ ಬೌದ್ಧ ಧರ್ಮದಲ್ಲಿದೆ. ನವ್ಯಕಾಲದ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಬೇಂದ್ರೆ ಮುಂತಾದವರು ಬೌದ್ಧ ಧರ್ಮದ ಮಹತ್ವವನ್ನು ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪಿಸಿದ್ದರು ಎಂದು ವಿವರಿಸಿದರು.
ಸುಳ್ಳು ಧರ್ಮದ ಭಾಗವಾಗಿರುವುದು ಪ್ರಸ್ತುತ ಕಾಲದ ದುರಂತ ಎಂದ ಅವರು, ನವ ಜೀವನ ಆಂದೋಲನದಲ್ಲಿ ಹೊಸ ಸಂಘರ್ಷ ಮಾಡಬಾರದು. ತಾಳ್ಮೆ, ಬುದ್ಧಿವಂತಿಕೆ, ಮೈತ್ರಿ ಭಾವದಿಂದ ಬಿಡುಗಡೆ ಹೊಂದಬೇಕು ಎಂದು ಕರೆನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ದಲಿತ ಸಮೂಹ ಬುದ್ಧನ ಆದರ್ಶವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಒಗ್ಗಟ್ಟಿನಿಂದ ನಡೆದರೆ, ಏನನ್ನಾದರೂ ಸಾಧಿಸಬಹುದು. ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಉದ್ದೇಶಿತ ಕಾರ್ಯಕ್ರಮಗಳಿಗೆ ಜಮೀನು ಮಂಜೂರು ಮಾಡುವುದು ಅತ್ಯಗತ್ಯವಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗಿ ಬೇಡಿಕೆ ಸಲ್ಲಿಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್‌ಬಸಪ್ಪ, ದಲಿತ ಹೋರಾಟಗಾರ ಪಿ.ವೇಲಾಯುಧನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮದ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net